ಅಫಗಾನ್ ಜನರಿಗೆ ಕ್ಯಾಂಡಿ ತೋರಿಸಿ ಕಸಿದುಕೊಂಡ ಅಮೇರಿಕಾ – ಅಸಹಾಯಕ ಅಂತರಾಷ್ಟ್ರೀಯ ಸಮುದಾಯ

ಈ ವರ್ಷ ಬಹುಷಃ ಅಂತಾರಾಷ್ಟ್ರೀಯ ಶಾಂತಿ ಸೌಹಾರ್ದತೆಯ ದೃಷ್ಟಿಯಲ್ಲಿ ಒಂದು ಕರಾಳ ವರ್ಷ ಎಂದು ಹೇಳಬಹುದು. ತಾಲಿಬಾನ್ ಎಂಬ ಭಯೋತ್ಪಾದಕ ಸಂಘ ಇಂದು ಮತ್ತೊಮ್ಮೆ ಅಫಘಾನಿಸ್ತಾನ ದೇಶವನ್ನು ಆವರಿಸಿಕೊಂಡು ಅಳತೊಡಗಿದೆ.

ಸೆಪ್ಟೆಂಬರ್ 2020 ರಲ್ಲಿ, ಅಮೇರಿಕಾ ಮತ್ತು ತಾಲಿಬಾನ್ ನಡುವಿನ ದೋಹಾ ಒಪ್ಪಂದದ ಭಾಗವಾಗಿ ಅಫ್ಘಾನ್ ಸರ್ಕಾರವು 400 ಕ್ಕೂ ಹೆಚ್ಚು ಆರೋಪಿಗಳು ಮತ್ತು ಕೊಲೆ ಮುಂತಾದ ಪ್ರಮುಖ ಅಪರಾಧಗಳಿಗೆ ಶಿಕ್ಷೆಗೊಳಗಾದ 5,000 ತಾಲಿಬಾನ್ ಕೈದಿಗಳನ್ನು ಬಿಡುಗಡೆ ಮಾಡಿತು. ಅಫ್ಘಾನಿಸ್ತಾನದ ರಾಷ್ಟ್ರೀಯ ಭದ್ರತಾ ಮಂಡಳಿಯ ಪ್ರಕಾರ, ಬಿಡುಗಡೆಯಾದ ಅನೇಕ ಕೈದಿಗಳು “ಪರಿಣಿತರು” ಯುದ್ಧಭೂಮಿಗೆ ಮರಳಿದರು ಮತ್ತು ತಾಲಿಬಾನರ ಕೈಯನ್ನು ಬಲಪಡಿಸಿದರು. ಕೇವಲ ೨ ತಿಂಗಳ ಹಿಂದೆಯೇ ಅಂದರೆ ಜೂನ್ 16 ರಂದು, ದೌಲತ್ ಅಬಾದ್ ನಲ್ಲಿ, ತಾಲಿಬಾನ್ ಪಡೆಗಳಿಗೆ ಶರಣಾಗಲು ಪ್ರಯತ್ನಿಸುತ್ತಿದ್ದಾಗ, 22 ನಿರಾಯುಧ ಅಫಘಾನ್ ವಿಶೇಷ ಪಡೆಗಳ ಕಮಾಂಡೋಗಳನ್ನು ಗುಂಡಿಟ್ಟು ಕೊಲ್ಲಲಾಯಿತು. ಇದರ ಒಂದು ವಿಡಿಯೋ ವ್ಯಾಪಕವಾಗಿ CNN ನಿಂದ ಪ್ರಸಾರವಾಗಿತ್ತು. ಹೀಗಿರುವಾಗ ಈ ಅಮೇರಿಕಾ ಹಾಗೂ ನ್ಯಾಟೋ ಪಡೆಗಳಿಗೆ ಬುದ್ದಿ ಕೆಟ್ಟಿತ್ತೇ? ಇಲ್ಲ ಇವರು ನಾಲ್ಕೈದು ವರ್ಷಗಳ ಹಿಂದೆಯೇ ನಾವು ಪಡೆಗಳನ್ನು ಹಿಂತೆಗೆದುಕೊಳ್ಳುತ್ತೇವೆ ಎಂದು ನಿರಂತರವಾಗಿ ಹೇಳುತ್ತಿದ್ದರು. ಅಂದಾಜಿನ ಪ್ರಕಾರ, ಅಮೇರಿಕಾ ಅಫ್ಘಾನಿಸ್ತಾನದಲ್ಲಿ ಯುದ್ಧಕ್ಕಾಗಿ ಇಲ್ಲಿಯವರೆಗೆ $ 2 ಟ್ರಿಲಿಯನ್ ಗಿಂತ ಹೆಚ್ಚು ಖರ್ಚು ಮಾಡಿದೆ. ಇದೆ ವರ್ಷದ ಏಪ್ರಿಲ್ ನಲ್ಲಿ , ಅಧ್ಯಕ್ಷ ಜೋ ಬಿಡೆನ್ 9/11 ದಾಳಿಯ ಇಪ್ಪತ್ತನೇ ವಾರ್ಷಿಕೋತ್ಸವದ ವೇಳೆಗೆ ಎಲ್ಲಾ USA ಮತ್ತು NATO ಪಡೆಗಳನ್ನು ಅಫ್ಘಾನಿಸ್ತಾನದಿಂದ ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದರು. ಈಗಾಗಲೇ ಹಲವು ಮಾಧ್ಯಮಗಳು ಅಮೇರಿಕಾ ಆತುರದ, ಕಳಪೆ ಯೋಜಿತ ಮತ್ತು ಅಸ್ತವ್ಯಸ್ತವಾದ ವಾಪಸಾತಿಯನ್ನು ನಡೆಸುತ್ತಿದೆ ಎಂದು ಆರೋಪಿಸುವುದನ್ನು ನೋಡಿದ್ದೇವೆ.
ಆದರೆ ತಾಲಿಬಾನ್ ಮುನ್ನಡೆಯ ವೇಗವು ಅಮೆರಿಕದ ಅಧಿಕಾರಿಗಳನ್ನು ದಿಗ್ಭ್ರಮೆಗೊಳಿಸಿದೆ ಜೊತೆಗೆ ಅಫ್ಘಾನಿಸ್ತಾನದಲ್ಲಿನ ರಾಜಕೀಯ ಕುಸಿತದ ವೇಗವು ಬಹಳಷ್ಟು ಜನರನ್ನು ಆಶ್ಚರ್ಯಗೊಳಿಸಿದೆ. ಆದರೆ ಈ ಅಮೇರಿಕಾ ದೇಶದ ನಿರ್ಧಾರ ಮತ್ತೆ ಅಫಘಾನಿಸ್ತಾನದಲ್ಲಿ ಕರಾಳ ದಿನಗಳನ್ನು ತಂದಿದೆ.

ನಮಗೆಲ್ಲ ಗೊತ್ತೇ ಇದೆ, 1980 ರಲ್ಲಿ ಸೋವಿಯತ್ ಒಕ್ಕೂಟದ ಕೊನೆಯ ವರ್ಷಗಳಲ್ಲಿ ಅಫಘಾನ್ ನಲ್ಲಿ ಅರ್ಥವಿಲ್ಲದ ಯುದ್ಧ ನಡೆಯಿತು. ರಷ್ಯಾ ಆಕ್ರಮಣವನ್ನು ಹಿಮ್ಮೆಟ್ಟಲು ಅಮೇರಿಕಾ, ಪಾಕಿಸ್ತಾನ, ಚೀನಾ, ಇರಾನ್ ಮತ್ತು ಸೌದಿ ಅರೇಬಿಯಾ ಸೋವಿಯತ್ ಪಡೆಗಳು ಮತ್ತು ಅವರ ಅಫಘಾನ್ ಮಿತ್ರರೊಂದಿಗೆ ಹೋರಾಡಿದ ಮುಜಾಹಿದ್ದೀನ್ ಗಳಿಗೆ ಹಣ ಮತ್ತು ಶಸ್ತ್ರಾಸ್ತ್ರಗಳನ್ನು ಪೂರೈಸಿದವು. ಅಲ್ಲಿಂದಲೇ ತಾಲಿಬಾನ್ ಹುಟ್ಟಿಕೊಂಡಿದ್ದು ಎಂಬುದು ಎಲ್ಲರಿಗೂ ಗೊತ್ತಿದೆ. ಫೆಬ್ರವರಿ 1989 ರಲ್ಲಿ ರಷ್ಯಾ ತನ್ನ ಪಡೆಗಳನ್ನು ವಾಪಾಸ್ ತಗೆದುಕೊಂಡಿತ್ತು. ಆದರೆ ಅದೇ ರಷ್ಯಾ ಇಂದು ತಾಲಿಬಾನ್ ನಡವಳಿಕೆಯನ್ನು ಹೊಗಳಿದೆ, ಬೇರೆ ಏನು ಪರ್ಯಾಯವಿಲ್ಲ ಮತ್ತು ತಾಲಿಬಾನ್ ಪ್ರತಿರೋಧ ವಿಫಲಗೊಳ್ಳುತ್ತದೆ ಎಂದು ಹೇಳಿದೆ. ಅದೇ ರೀತಿ ಚೀನಾ ಕೂಡ ತನ್ನ ಸ್ವಂತ ಆಸಕ್ತಿಯಿಂದ ಬೆಂಬಲ ನೀಡುವ ಪ್ರಯತ್ನ ಮಾಡುತ್ತಿದೆ. ಅಫ್ಘಾನಿಸ್ತಾನದಲ್ಲಿ ಚೀನಾಕ್ಕೆ ಹೆಚ್ಚಿನ ಆಸಕ್ತಿ ಇದೆ. ಅಫ್ಘಾನಿಸ್ತಾನದೊಂದಿಗೆ ಚೀನಾ ಗಡಿ ಇರುವದರಿಂದ ಅಲ್ಲಿನ ಖನಿಜ ಪದಾರ್ಥಗಳ ವ್ಯಾಪಾರಕ್ಕೆ ಪೀಠಿಕೆ ಹಾಕಿದೆ. ಆದರೆ ಅದಕ್ಕಿಂತ ಮುಖ್ಯವಾಗಿ ಚೀನಾ ಪಾಕಿಸ್ತಾನದಲ್ಲಿ 50 ಬಿಲಿಯನ್ ಗಿಂತ ಹೆಚ್ಚು ಬಂಡವಾಳ ಹೂಡಿರುವದರಿಂದ ಅಸ್ಥಿರತೆ ಪಾಕಿಸ್ತಾನದಲ್ಲಿ ಆಗಬಾರದು ಎಂಬುದು ಚೀನಾ ದೇಶದ ಉದ್ದೇಶವಾಗಿದೆ. ಚೀನಾ ಇತ್ತೀಚಿಗೆ ತಾಲಿಬಾನ್ ಆಡಳಿತವನ್ನು ಹೊಗಳಿರುವುದು ಚೀನಾ ದೇಶದ ಜನರಿಗೆ ಇಷ್ಟವಾಗುತ್ತಿಲ್ಲ ಎಂಬ ವರದಿಯು ಬಂದಿದೆ.

ಆದರೆ ಅಮೇರಿಕಾ 9/11 ದಾಳಿಯ ನಂತರ ತಾಲಿಬಾನ್ ನನ್ನ ಸಂಪೂರ್ಣ ನಾಶ ಮಾಡುತ್ತೇನೆಂದು ಹಾಗೂ ಅಲ್ಲಿ ಪ್ರಜಾ ಪ್ರಭುತ್ವ ಸ್ಥಾಪನೆ ಮಾಡುತ್ತೇನೆಂದು ಅಫಘಾನ್ ಜನರಿಗೆ ಕ್ಯಾಂಡಿ ತೋರಿಸಿ ಈಗ ಆ ಜನತೆಗೆ ಅನ್ಯಾಯ ಮಾಡಿದೆ ಎಂಬುದು ನನ್ನ ಅಭಿಪ್ರಾಯ. ಇಂದು ಅದೇ ಪಾಶ್ಚತ್ಯ ಮೀಡಿಯಾ ಗಳು ಇದೊಂದು ಬದಲಾದ ತಾಲಿಬಾನ್ ಎಂದು ತೋರಿಸುತ್ತಿವೆ. ಇದೆಲ್ಲ ತಮ್ಮ ವೈಫಲ್ಯತೆಯನ್ನು ಮುಚ್ಚು ಹಾಕುವ ಪ್ರಯತ್ನ ಎನ್ನಬಹುದು. ಇಂದು ಈ ಬೆಳವಣಿಗೆಯ ಮದ್ಯ ಅಂತಾರಾಷ್ಟ್ರೀಯ ರಾಜಕೀಯದ ಬಲಿಪಶುಗಳಾಗಿರುವವರು ಅಫಘಾನ್ ನಲ್ಲಿರುವ ಸಾಮಾನ್ಯ ನಾಗರಿಕರು. ಇಂದು ಹತಾಶರಾಗಿ ದೇಶವನ್ನು ಬಿಟ್ಟು ಪಲಾಯನ ಮಾಡಲು ಹಾತೊರೆಯುತ್ತಿರುವ ಆ ಮುಗ್ಧ ಅಫ್ಘಾನ್ ನಾಗರೀಕರು ಹೇಗೆ ಈ ಅನ್ಯಾಯವನ್ನು ಸಹಿಸಿಕೊಂಡು ಜೀವನ ಮಾಡುವರೋ ಎಂದು ಊಹಿಸಿದರೆ ಹೃದಯ ಕರಗಿ ಕಣ್ಣಲ್ಲಿ ನೀರು ಬರುತ್ತದೆ. ನಾವು ಇಷ್ಟು-ಅಷ್ಟು ನಿರಾಶ್ರಿತರನ್ನು ನಮ್ಮ ದೇಶಕ್ಕೆ ಬರಮಾಡಿಕೊಳ್ಳುತ್ತೇವೆ ಎಂದು ಲೆಕ್ಕ ಹಾಕುವ ಎಲ್ಲಾ ದೇಶಗಳು ಈ ರೀತಿ ಕೇವಲ ಕೆಲವೇ ಆಯ್ದ ನಿರಾಶ್ರಿತರಿಗೆ ಆಶ್ರಯ ಕೊಡುವ ಬದಲು ಅಫಘಾನ್ ದೇಶದಲ್ಲಿ ಒಂದು ಸುಭದ್ರ ನಾಗರೀಕ ಸರಕಾರ ಸ್ಥಾಪಿಸುವ ಬಗ್ಗೆ ಒಗ್ಗಟ್ಟಾಗಿ ಕೆಲಸ ಮಾಡಲಿ ಎಂಬುದೇ ನನ್ನ ಆಶಯ.

ಗಣಪತಿ ಭಟ್
ಲಂಡನ್

Comments

comments