ವರ್ಷದ ಅಂತ್ಯದಲ್ಲಿ ನಮಗೆ ತಗಲಿದ ಕೋವಿಡ್ ಭಾಗ್ಯ

ವರ್ಷದ ಅಂತ್ಯದಲ್ಲಿ ನಮಗೆ ತಗಲಿದ ಕೋವಿಡ್ ಭಾಗ್ಯ

ಭಾನುವಾರ ಭಾಗೀರಥಿ ಗುರುಮಾ ಅವರ ಸರಳ ಸುಂದರ ಯೋಗ ಮಾಡಿದ ನೋವು ಇನ್ನೂ ಇದೆಯಲ್ವಾ ಎಂದು ಸೋಮವಾರ ಹಾಸಿಗೆಯಿಂದ ಎದ್ದಾಗ ಸ್ವಲ್ಪ ಆಶ್ಚರ್ಯ ಎನ್ನಿಸಿತು. ಸೋಮವಾರ ಬೆಳಿಗ್ಗೆ ಎದ್ದಾಗ ಯಾಕೋ ತಲೆ ಎಲ್ಲ ಗಿರ್ ಗಿರ್ ಎನ್ನುತಿದೆ, ಸುಸ್ತಾಗುತ್ತಿದೆ ಎಂದು ಅನುಭವಾಗತೊಡಗಿತು. ಹಾಗೋ ಹೀಗೋ ದಿನ ಕಳೆದೆ. ಮಂಗಳವಾರ ಬೆಳಿಗ್ಗೆ ಭಾರತದಿಂದ ಅಪರೂಪದ ಕರೆ… ಗಣಪತಿ ಭಟ್ಟರೇ ಸುವರ್ಣ ಟಿವಿ ಯಲ್ಲಿ ಕೋವಿಡ್ ಬಗ್ಗೆ ಒಂದು ಚರ್ಚೆ ಇದೆ ಬರ್ತೀರಾ ಎಂದು. ಹೂ ಎಂದು ಒಪ್ಪಿಕೊಂಡೆ. ಯುನೈಟೆಡ್ ಕಿಂಗ್ಡಮ್ ನಲ್ಲಿ ಸಂಖ್ಯೆ ಏರುತ್ತಿದೆ, ಆದರೆ ಭಯ ಪಡುವದೇನೂ ಇಲ್ಲ ಎಂದು ಹೇಳಿದಾಗ ನಾನೂ ಕೂಡ ಕೋವಿಡ್ ಪಾಸಿಟಿವ್ ಆಗಬಹುದೇನೋ ಎಂದು ಅನ್ನಿಸಿರಲಿಲ್ಲ. ಬ್ರಿಟನ್ ವೈರಸ್ ಎಂದು ಆಗಲೇ ಕರ್ನಾಟಕದಲ್ಲಿ ಘೋಷಣೆ ಆಗಿಬಿಟ್ಟಿತ್ತು. ಮಂಗಳವಾರವೂ ಏನೋ ವಿಚಿತ್ರವಾಗಿ ಸಂಪೂರ್ಣ ದೇಹ ನೋವಿದೆಯಲ್ಲಾ ಎಂದು ಆಗಾಗ ಗಾಬರಿ ಆಗ ತೊಡಗಿತು. ಬುಧವಾರ ಎದ್ದಾಗ ಈ ಮೈ ನೋವಿನ ತೀವ್ರತೆ ಇನ್ನೂ ಜಾಸ್ತಿಯಾಗಿತ್ತು. ಚಳಿ ಹಾಗೂ ಜ್ವರದ ಅನುಭವ ಪದೇ ಪದೇ ಆಗತೊಡಗಿತು. ಸಂಜೆ ಆಫೀಸ್ ಕೆಲಸ ಮುಗಿಸಿ ಬಿಸಿ ಬಿಸಿ ಸ್ನಾನ ಮಾಡೋಣ ಎಂದು ಹೋದೆ. ಸ್ನಾನ ಮಾಡುವಾಗಲೇ, ನಿರಂತರವಾಗಿ ಖೆಮ್ಮು ಬರತೊಡಗಿತು. ಸ್ನಾನ ಮುಗಿಸಿ ಹೊರ ಬಂದಾಗ ಪತ್ನಿ ವೀಣಾ ಹತ್ತಿರ ಏನೋ ಸರಿ ಇಲ್ಲ, ಜ್ವರದ ಅನುಭವ ಅಗ್ತಾ ಇದೆ ಎಂದೆ. ಮಗಳು ಹಾಗೂ ವೀಣಾ ಸುಮ್ನೆ ನಿಮ್ಮ ಭ್ರಮೆ ಎಂದು ಗೇಲಿ ಮಾಡಿದರು. ಆಗಲೇ ಕೋಪಿತನಾಗಿ ಒಂದೆರಡು ಸಿಟ್ಟಿನಲ್ಲಿ ಇಬ್ಬರಿಗೂ ಬೈದೆ. ಇನ್ನೇನು ರಾತ್ರಿ ಊಟ ಮಾಡುವಾಗ ಜ್ವರದ ಅನುಭವ ಹೆಚ್ಚಾಗಿತ್ತು. ವೀಣಾ ದಿನ ನಿತ್ಯದ ಸಾಮಾನು ತರುತ್ತೇನೆಂದು ಪಕ್ಕದಿಲ್ಲಿರುವ ಟೆಸ್ಕೋ ಅಂಗಡಿಗೆ ಹೋದಳು. ನಾನು ಥರ್ಮಾಮೀಟರ್ ನಲ್ಲಿ ಮಾಪನ ನೋಡಿದಾಗ ಹೌದು ೩೮ ಡಿಗ್ರಿ ಇದೆ ಎಂದು ಕೂಡಲೇ ಕೋವಿಡ್ ಟೆಸ್ಟ್ ಬುಕ್ ಮಾಡಲು NHS Website ನಲ್ಲಿ ಪ್ರಾರಂಭಿಸಿದೆ. ಗುರುವಾರ ೧೨ ಘಂಟೆ ಮಧ್ಯಾಹ್ನ ನನಗೆ ಹಾಗೂ ವೀಣಾ ಇಬ್ಬರಿಗೂ ಡ್ರೈವ್ ಇನ್ ಅಪ್ಪೋಯಿಂಟ್ಮೆಂಟ್ ಸಿಕ್ಕಿತು. ಬುಧವಾರ ರಾತ್ರಿ ಒಂದು ಲೇಂಸಿಪ್ ಕುಡಿದು ಮಲಗಿದಾಗ ಬೆಳಿಗ್ಗೆ ಜ್ವರ ಹೋಗಿತ್ತು. ಬುಧವಾರದಿಂದಲೇ ನಾನು ನನ್ನ ರೂಮ್ ನಲ್ಲಿ ಐಸೋಲೇಟ್ ಆಗಿದ್ದೆ.

ಗುರುವಾರ ಸಹ ಅಷ್ಟೇನೂ ಜ್ವರ ಅಥವಾ ಟೇಸ್ಟ್, ಸ್ಮೆಲ್ ಹೋಗುವುದು ಆಗಲಿಲ್ಲ.. ಇದು ಯಾವುದೋ ಸಿಂಪಲ್ ಕ್ರಿಸ್ಮಸ್ ಬಗ್ ಇರಬಹುದು ಅಂದುಕೊಂಡಿದ್ದೆ. ಶುಕ್ರವಾರ ಸಂಜೆ NHS ನಿಂದ ನೀನು ಕೋವಿಡ್ ಪಾಸಿಟಿವ್ ಆಗಿದೀಯ ಎಂದು SMS ಸಂದೇಶ ಬಂದಾಗ ಅಯ್ಯೋ ರಜೆ ಪೂರ್ತಿ ಒಂದೇ ರೂಮ್ ನಲ್ಲಿ ಐಸೋಲೇಟ್ ಆಗಬೇಕಲ್ವಾ ಎಂದು ಬೇಜಾರಾಯಿತು. ಒಂದೇ ಮನೆಯಲ್ಲಿ ಇರುವಾಗ ಎಲ್ಲರೂ ಐಸೋಲೇಟ್ ಆಗುವುದು ತುಂಬಾ ಕಷ್ಟ. ಆಗಲೇ ಪತ್ನಿ ವೀಣಾ ಕೂಡ ನೆಗೆಟಿವ್ ರಿಸಲ್ಟ್ ಬಂದರೂ, ಕೋವಿಡ್ ಥರದ ಎಲ್ಲಾ ಸಿಂಪ್ಟಮ್ ಅವಳಲ್ಲಿ ಶುರುವಾಗಿತ್ತು. ಹತ್ತಾರು ಜನರ ಕೋವಿಡ್ ಆದ ಬಗ್ಗೆ, ಅವರ ಹಾಸ್ಪಿಟಲ್ ಅಡ್ಮಿಟ್ ಆದ ಬಗ್ಗೆ, ಹಾಗೂ ಹೇಗೆ ಕೆಲವರು ವೆಂಟಿಲೇಟರ್ ತನಕ ಹೋಗಿ ಕಷ್ಟ ಪಟ್ಟಿರುವ ಬಗ್ಗೆ ಕೇಳಿದ ನನಗೆ ಇನ್ನೇನು ಯಾವ ರೀತಿಯ ತೊಂದರೆ ಆಗುತ್ತದೇನೋ ಎಂಬ ಒಳಗೊಳಗೇ ಭೀತಿ ಭಯ ಕಾವರಿಸ ತೊಡಗಿತು. ಹಲವಾರು ಸ್ನೇಹಿತರೊಂದಿಗೆ ನನಗೆ ಕೋವಿಡ್ ಬಂದಿದೆ ಎಂದು ಹೇಳಿಕೊಂಡಾಗ ಎಲ್ಲರೂ ಭಯ ಪಡಬೇಡ, ಎಲ್ಲಾ ಸರಿ ಹೋಗುತ್ತದೆ ಎಂದು ಆಶ್ವಾಸನೆ ನೀಡಿದಾಗ ಹೌದು ಇದನ್ನು ಪೊಸಿಟಿವಿಟಿ ಯಿಂದ ನೋಡಬೇಕು, ಮನಸ್ಸಿನ ಹಾಗೂ ದೇಹದ ಸಮತೋಲನ ಕಾದುಕೊಂಡರೆ, ಇಂತಹ ಸ್ಥಿತಿಯಿಂದ ಹೆಚ್ಚು ನೋವಿಲ್ಲದೆ ಹೊರ ಬರಬಹುದು ಎಂದು ಅನ್ನಿಸಿತು.

ಈಗ ಯುನೈಟೆಡ್ ಕಿಂಗ್ಡಮ್ ನಲ್ಲಿ ಅತ್ಯಂತ ಡೆಪ್ರೆಸ್ಸಿಂಗ್ ವಾತಾವರಣ. ದಿನೇ ದಿನ ಕೋವಿಡ್ ಸಂಖ್ಯೆ ಏರುತ್ತಲೇ ಇದೆ. ದಿನಕ್ಕೆ ದೇಶದುದ್ದಕ್ಕೂ ೨೫ ಸಾವಿರಕ್ಕಿಂತ ಹೆಚ್ಚು ಕೋವಿಡ್ ಪಾಸಿಟಿವ್ ಕೇಸ್ ಗಳು. ಪ್ರತಿಯೊಬ್ಬ ಪಾಸಿಟಿವ್ ಕೇಸ್ ೧೦ ದಿನ ಐಸೋಲೇಷನ್ ಹೋದಾಗ ಪ್ರತಿ ದಿನ ೨ ವರೆ ಲಕ್ಷ ದಿನಗಳ ಹಾನಿ ಆಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಹಾಸ್ಪಿಟಲ್ ಗಳು ತುಂಬಿ ತುಳುಕುತ್ತಿರುವ ಸಮಾಚಾರಗಳು ಬಂದಾಗ ಅಯ್ಯೋ ನ್ಯೂಸ್ ಎಲ್ಲಾ ನೆಗೆಟಿವ್ ಅಂತ ಅನ್ನಿಸುವುದು ಸಹಜ.
ಇಂತಹ ಕಠಿಣ ಪರಿಸ್ಥಿತಿಯಲ್ಲಿ ಯುಕೆ ಸರ್ಕಾರ ಎಲ್ಲಾ ತರದ ಜನರಿಗೆ ಉಪಯುಕ್ತವಾಗುವ ಯೋಜನೆಗಳನ್ನು ಕೈಗೊಂಡಿದೆ. ಕೋವಿಡ್ ಟೆಸ್ಟ್ ಆದ ನಂತರ ಜನರನ್ನು ಟ್ರೇಸ್ ಮಾಡಿ, ಐಸೋಲೇಷನ್ ಮಾಡುವುದು, ಹಾಗೆಯೇ ಕೆಲವು ಆರ್ಥಿಕವಾಗಿ ಬಡ ಪರಿವಾರಗಳು ಐಸೋಲೇಷನ್ ಹೋದಲ್ಲಿ ಅವರಿಗೆ ವಾರಕ್ಕೆ ೫೦೦ ಪೌಂಡ್ ನೆರವು ನೀಡುವುದನ್ನೂ ಕೂಡ ಸರಕಾರ ಮಾಡುತ್ತದೆ. ಎಷ್ಟೋ ಜನ ಕೋವಿಡ್ ಬಂದರೆ ಸರಕಾರಕ್ಕೆ ಹೇಳುವದೇ ಇಲ್ಲ. ಹೀಗಿರುವಾಗ ಅಂಕಿ ಅಂಶ ಎಷ್ಟೇ ನಿಖರವಾಗಿದ್ದರೂ, ನಿಜವಾಗಿಯೂ ಕೋವಿಡ್ ನಿಂದ ಬಳಲುತ್ತಿರುವ ಸಂಖ್ಯೆ ಜಾಸ್ತಿಯೇ ಎಂದು ಹೇಳಬಹುದು.
ನಾವೆಲ್ಲಾ ನಮ್ಮ ಮನೆ, ಕುಟುಂಬ ಹಾಗೂ ದೇಶವನ್ನು ಬಿಟ್ಟು ಪಾಶ್ಚಿಮಾತ್ಯ ದೇಶಗಳಿಗೆ ಬದುಕನ್ನ ಕಟ್ಟಲು ಬಂದಿರುವದರಿಂದ ನಮ್ಮ ಉಪಯೋಗಕ್ಕೆ ಬರುವವರು ನಮ್ಮ ಜೊತೆ ಈ ದೇಶಕ್ಕೆ ಬಂದವರೇ. ಈ ದೇಶದಲ್ಲಿ ಕಾನೂನು, ಪದ್ಧತಿ, ಸರಕಾರದ ನಿಮ್ಮ ಎಲ್ಲಾ ಸುಗಮವಾಗಿ ಸಾಗುತ್ತದೆ ಆದರೆ ಮಾನಸಿಕವಾಗಿ ಮನುಷ್ಯನಿಗೆ ಯಾವುದೇ ರೀತಿಯ ಕಷ್ಟ ಬಂದಾಗ ಒಂದು ಹೆಲ್ಪ್ ಲೈನ್ ಬಿಟ್ಟರೆ ಏನೂ ಇರುವುದಿಲ್ಲ.
ಇಲ್ಲಿರುವ ನಮ್ಮ ಕನ್ನಡ ಪರಿವಾರಗಳು ನನಗೆ ಕೋವಿಡ್ ಆಗಿರುವ ಸುದ್ದಿ ಗೊತ್ತಾದ ಕೂಡಲೇ ಏನಾದರೂ ಸಹಾಯ ಬೇಕಾ ಎಂದು ವಿಚಾರಣೆ ಮಾಡಿದಾಗ ನಾವು ಬೇರೆ ದೇಶದಲ್ಲಿ ಇಲ್ಲ ಎಂಬ ಮನವರಿಕೆ ಆಯಿತು. ನಮ್ಮ ಪಕ್ಕದ ಮನೆಯವರು, ಊಟ ತಯಾರು ಮಾಡಿ ಮನೆಗೆ ತಂದು ಬಾಗಿಲಲ್ಲಿ ಇಟ್ಟು ನಮ್ಮ ಬಗ್ಗೆ ಎಷ್ಟೊಂದು ಕಾಳಜಿ ವಹಿಸಿದರು. sutton ನಲ್ಲಿ ಇರುವ ಇನ್ನೊಂದು ಕನ್ನಡ ಪರಿವಾರವೂ ಕೂಡ ಬಿಸಿ ಬಿಸಿ ಇಡ್ಲಿ ಹಾಗೂ ಸಾಂಬಾರ್ ತಂದು ಕೊಟ್ಟು ನಮ್ಮನ್ನು ಕಾಳಜಿಯಿಂದ ವಿಚಾರಿಸಿಕೊಂಡರು. ಆಪ್ತರಲ್ಲೊಬ್ಬರು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ನಮ್ಮ ಹೆಸರಿನಲ್ಲಿ ವಿಶೇಷ ಅರ್ಚನೆ ಪೂಜೆಯನ್ನು ಕೂಡ ಹಮ್ಮಿಕೊಂಡರು.
ಹೀಗೆಯೇ ಎಲ್ಲರ ಪ್ರೀತಿ ವಿಶ್ವಾಸ ಹಾಗೂ ಆಶೀರ್ವಾದದಿಂದ ಈ ದಿನ ೩೧ ನೇ ಡಿಸೆಂಬರ್ ನಂದು ಸಂಪೂರ್ಣ ಕೋವಿಡ್ ನಿಂದ ಗುಣಮುಖನಾಗಿಲ್ಲದಿದ್ದರೂ, ಪ್ರಭಲನಾಗಿದ್ದೇನೆ.

ಕೋವಿಡ್ ನಿಂದ ಬಳಲಿದ ಎಲ್ಲಾ ಪರಿವಾರಗಳು ಗುಣಮುಖರಾಗಿ ಹೊಸ ವರ್ಷವನ್ನು ಹೊಸ ಹುಮ್ಮಸ್ಸಿನೊಂದಿಗೆ ಹೆಚ್ಚಿನ ಅರೋಗ್ಯ ಐಶ್ವರ್ಯ ಪಡೆದು ಸಂಭ್ರಮಿಸುವಂತವರಾಗಲಿ ಎಂದು ಆಶಿಸಿ ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು

Comments

comments