“ಆಯಾಮ‌” ಅರ್ಪಿಸುವ ಯಕ್ಷಗಾನ – ದಕ್ಷಯಜ್ಞ

ಸ್ನೇಹಿತರೇ,
ನಮಸ್ಕಾರ. ಈ ವಾರಾಂತ್ಯ ಅಂದರೆ ಭಾನುವಾರ ದಿನಾಂಕ ೧೭ ನೇ ಜನವರಿಯಂದು ಒಂದು ವಿಶೇಷ ಯಕ್ಷಗಾನ ಕಾರ್ಯಕ್ರಮವನ್ನು ಅನಿವಾಸಿ ಯಕ್ಷಗಾನ ಅಭಿಮಾನಿ ಮಂಡಳಿ ಯುನೈಟೆಡ್ ಕಿಂಗ್ಡಮ್ (ಆಯಾಮ) ಹಮ್ಮಿಕೊಂಡಿದೆ.

ನಮ್ಮ ಕರಾವಳಿಯ ಹೆಮ್ಮೆಯ ಯಕ್ಷಗಾನ ಜಾಲತಾಣದ ಮೂಲಕ ಯುಕೆಯ ಮನೆ ಮನೆಗಳಲ್ಲಿ ತಲುಪುತ್ತಿರುವುದು ಒಂದು ವಿಶೇಷವಾದ ಸಂತೋಷವೇ! ಪ್ರತಿ ವರ್ಷ ಬಣ್ಣ ವೇಷ ಧರಿಸಿ ನಮ್ಮ ಯುಕೆ ಕನ್ನಡಿಗ, ಲೇಖಕ ಹಾಗೂ ವಿಮಾನ ತಾಂತ್ರಿಕ ತಜ್ಞ ಯೋಗಿಂದ್ರ ಮರವಂತೆ ಯಕ್ಷಗಾನದ ಪ್ರಚಾರ ಮಾಡುತ್ತಿರುವುದನ್ನು ನಾವು ನೋಡಿದ್ದೇವೆ. ಅವರ ಜೊತೆ ಗುರುಪ್ರಸಾದ್ ಪಟವಾಲ್ ಕೂಡ ಹಲವಾರು ಕನ್ನಡ ಸಂಸ್ಥೆ ಸಂಘಗಳಲ್ಲಿ ನೂರಾರು ಮೈಲು ಪ್ರಯಾಣ ಮಾಡಿ ಕಳೆದ ಹಲವಾರು ವರ್ಷಗಳಿದ ನಿರಂತರವಾಗಿ ಯಕ್ಷಗಾನದ ಪ್ರಚಾರವನ್ನು ಲಾಭೋದ್ದೇಶವಿಲ್ಲದೆ ಮಾಡುತ್ತಿರುವುದು ಶ್ಲಾಘನೀಯ. ಇನ್ನೂ ಹಲವಾರು ಕನ್ನಡಿಗರು ಈ ಕಲೆಯನ್ನು ಇಲ್ಲಿ ಆಂಗ್ಲನಾಡಿನಲ್ಲಿ ಪಸರಿಸುತ್ತಿರುವುದು ಸಂತಸದ ವಿಷಯ. ಇವರೆಲ್ಲರ ನಿರಂತರ ಪ್ರಯತ್ನದ ಫಲವೇ ಈ ಆಯಾಮ!

ಕಳೆದ ಎರಡು ವರ್ಷದ ಹಿಂದೆ ನಮ್ಮ ಇಡಗುಂಜಿ ಮೇಳ ಇಂಗ್ಲೆಂಡಿಗೆ ಬಂದು ಲಂಡನ್ ನಲ್ಲಿ ಹಾಗೂ ಮಧ್ಯ ಆಂಗ್ಲ ನಾಡಿನಲ್ಲಿ ಪ್ರದರ್ಶನ ಮಾಡುವದಕ್ಕೆ ಎಲ್ಲಾ ವ್ಯವಸ್ಥೆಯಾಗಿತ್ತು. ಧನ ಸಹಾಯಕ್ಕೆ ಸಾಕಷ್ಟು ಗೆಳೆಯರು ಕೂಡಾ ಮುಂದೆ ಬಂದಿದ್ದರು.. ಆದರೆ ಕಾರಣಾಂತರದಿಂದ ಅದು ಆಗಲಿಲ್ಲ. ಇಲ್ಲಿಯ ಯಕ್ಷಗಾನ ಅಭಿಮಾನಿಗಳ ಹುಮ್ಮಸ್ಸು, ಕಲಾಕಾರರಿಗೆ ಬೆನ್ನು ತತ್ತಿ ಪ್ರೋತ್ಸಾಹಿಸುವ ಮನೋಭಾವದ ಫಲವೇ ಇಂದು ಆಯಾಮ ಆಯೋಜಿಸುತ್ತಿರುವ ಪ್ರದರ್ಶನದ ಮೂಲಕ ನಾವು ತಿಳಿಯಬಹುದು.

ಭಾನುವಾರ ನಡೆಯುವ ಪ್ರದರ್ಶನ ಒಂದು ಉಚಿತ ಪ್ರದರ್ಶನ. ನೋಂದಣಿ ಮಾಡಿದವರಿಗೆ ಯೌಟ್ಯೂಬ್ ಲಿಂಕ್ ಕಳುಹಿಸಲಾಗುತ್ತದೆ. ಇದಕ್ಕೆ ಸಾಕಷ್ಟು ಖರ್ಚು ವೆಚ್ಚಗಳು ಇರುವದರ ಹೊರತು ಕಲಾವಿದರಿಗೆ ಸಹಾಯ ಧನ ನೀಡುವ ಒಂದು ಒಳ್ಳೆಯ ನಿರ್ಧಾರವನ್ನು ಆಯಾಮ ತಂಡ ತೆಗೆದುಕೊಂಡಿದೆ. ಇದಕ್ಕಾಗಿ ಸ್ವಯಂಪ್ರೇರಿತ ದೇಣಿಗೆಗಳನ್ನು ಕೃತಜ್ಞತಾಪೂರ್ವಕವಾಗಿ ಸ್ವೀಕರಿಸಲಾಗುತ್ತಿದೆ. ಅನೇಕರು ಕೈಲಾದಷ್ಟು ದೇಣಿಗೆ ನೀಡಿದ್ದಾರೆ. ಇದಲ್ಲದೇ, ನೋಡುಮಗ.ಕಾಂ, ಏವನ್ ಲೋಗೋ ಹಾಗೂ ಸ್ಟೋನ್ ಏಜ್ ಪ್ರಾಪರ್ಟೀಸ್ ಅವರು ಪ್ರಾಯೋಜಕತ್ವವನ್ನು ಕೂಡ ನೀಡಿದ್ದಾರೆ. ಆಯಾಮದ ಹಿಂದೆ ಬೆನ್ನೆಲುಬಾಗಿ ಕಲೆಯ ಪ್ರೋತ್ಸಾಹಕ್ಕಾಗಿ ಅನೇಕ ದಾನಿಗಳು ಮುಂದೆ ಬಂದಿದ್ದಾರೆ.

ನೀವು ನೋಂದಣಿ ಮಾಡುವರಾದರೆ ಕೆಳಗಿನ ಲಿಂಕ್ ಒತ್ತಿ.

https://www.tickettailor.com/events/ayamauk/470665

ಇನ್ನು ಯಕ್ಷಗಾನ ಪ್ರದರ್ಶನದ ಬಗ್ಗೆ ಹೇಳುವದಾದರೆ, ದಕ್ಷಯಜ್ಞ ಒಂದು ಅತ್ಯುತ್ತಮ ಆಟ. ಶಿವನನ್ನು ಅವಮಾನಿಸುವ ಉದ್ದೇಶದಿಂದಲೇ ಯಜ್ಞವನ್ನು ಆಯೋಜಿಸಿದ ದಕ್ಷ ತನ್ನ ಮಗಳಾದ ದಾಕ್ಷಾಯಿಣಿ ಹಾಗೂ ಅಳಿಯ ಶಿವನಿಗೆ ಆಮಂತ್ರಣ ಕಳುಹಿಸುವುದಿಲ್ಲ. ಯಜ್ಞಕ್ಕೆ ತೆರಳುತ್ತಿರುವ ಬ್ರಾಹ್ಮಣರಿಂದ ಸುದ್ದಿ ತಿಳಿದ ದಾಕ್ಷಾಯಿಣಿ, ಶಿವನ ಸಮ್ಮತಿಯ ಹೊರತಾಗಿಯೂ ಯಜ್ಞಕ್ಕೆ ತೆರಳಿ, ಅಲ್ಲಿ ತಂದೆಯಿಂದ ಮತ್ತೆ ಅವಮಾನಿತಳಾಗಿ ಯಜ್ಞ ಕುಂಡದಲ್ಲಿ ಹಾರಿ ಪ್ರಾಣ ತ್ಯಜಿಸುತ್ತಾಳೆ. ಪತ್ನಿಯ ಅಪಮಾನ ಹಾಗೂ ಮರಣದಿಂದ ಸಿಟ್ಟುಗೊಂಡ ಶಿವ ವೀರಭದ್ರನ‌ ಮೂಲಕ ದಕ್ಷನನ್ನು ಸಂಹರಿಸುತ್ತಾನೆ.

ಪ್ರಸಂಗ ಹಾಗು ಕಲಾವಿದರ ವಿವರ ಪೋಸ್ಟರ್ ಅಲ್ಲಿ ಇದೆ. ಉಡುಪಿಯ ಸಮೀಪದ ಸಾಲಿಗ್ರಾಮದಲ್ಲಿರುವ ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರದ ರಂಗಸ್ಥಳದಿಂದ ಯೂ ಟ್ಯೂಬ್ ,ಫೇಸ್ ಬುಕ್ ಗಳ ಮೂಲಕ ಈ ಯಕ್ಷಗಾನ ನಿಮ್ಮ ಮನೆಗಳನ್ನು ತಲುಪಲಿದೆ.

ಹುಟ್ಟೂರಿನಿಂದ ದೂರ ಇದ್ದರೂ ,ಇದ್ದಲ್ಲಿಂದಲೇ ಯಕ್ಷಗಾನ ಪ್ರದರ್ಶನವನ್ನು ನೋಡುವ ಉತ್ಸಾಹ ಹಾಗು ಕೋವಿಡ್ ಕಾಲದಲ್ಲಿ ಪ್ರದರ್ಶನಗಳ ಸಂಖ್ಯೆ ಕಡಿಮೆಯಾದ ಕಾರಣದಿಂದ ಸಂಕಟಕ್ಕೊಳಗಾದ ಕೆಲವು ಕಲಾವಿದರಿಗೆ, ಯಕ್ಷಗಾನವನ್ನು ನಂಬಿ ಬದುಕು ನಡೆಸುವವರಿಗೆ, ಅಕಾಲಿಕವಾಗಿ ಗತಿಸಿದ ಕಲಾವಿದರ ಕುಟುಂಬಗಳಿಗೆ ಕಿರು ಸಹಾಯಧನವನ್ನು ಒದಗಿಸುವುದು ಈ ಲೈವ್ ಕಾರ್ಯಕ್ರಮದ ಹಿಂದಿನ ಉದ್ದೇಶಗಳು.

ಭಾನುವಾರ ಹಮ್ಮಿಕೊಂಡಿರುವ ಈ ಮೊದಲ ಆಯಾಮ ತಂಡದ ಪ್ರಯತ್ನ ಸಫಲವಾಗಲಿ, ಯಕ್ಷಗಾನ ಪ್ರದರ್ಶನ ಹೆಚ್ಚು ಹೆಚ್ಚು ಆಂಗ್ಲ ನಾಡಿನ ಹಾಗೂ ಹೊರಗಡೆಗೆ ವಾಸವಾಗಿರುವ ಅನಿವಾಸಿ ಕನ್ನಡಿಗರನ್ನ ತಲುಪಲಿ.
ಆಯಾಮ ತೆಗೆದುಕೊಂಡಿರುವ ಈ ಘನ ಕಾರ್ಯಕ್ಕೆ ಶುಭವಾಗಲಿ.
ಯಕ್ಷಗಾನಂ ಗೆಲ್ಗೆ

Comments

comments