ಇಂಗ್ಲಿಷ್ ಕ್ರಿಕೆಟ್ Life

ಇಂಗ್ಲಿಷ್ ಕ್ರಿಕೆಟ್ Life
ಜೂನ್ ತಿಂಗಳಿಂದ ಶುರುವಾಗುವ ಇಂಗ್ಲಿಷ್ ಸಮ್ಮರ್ ಕಾಲವು ಒಂದು ರೀತಿಯ ವಿಶೇಷ ಅನುಭವ .. ನಿಜ ಹೇಳಬೇಕೆಂದರೆ ಇಂಗ್ಲೆಂಡ್ ದೇಶದಲ್ಲಿ ಸಮ್ಮರ್ ಬಿಟ್ಟು ಎಲ್ಲಾ ಇದೆ.. ದಿನಕ್ಕೆ ೪-೫ ಬಾರಿ ಮಳೆ, ಗಾಳಿ ಹಾಗೂ ಮೋಡಗಳ ಮದ್ಯ ಕಣ್ಣು ಮುಚ್ಚಾಲೆ ಆಡುವ ಸೂರ್ಯ..ಹೀಗೆಯೇ ಬೇಸಿಗೆಯಲ್ಲಿ ಕ್ರಿಕೆಟ್ ಮ್ಯಾಚ್ ಗಳು ಮಳೆಯ ಕಾರಣ ರದ್ದಾಗುವುದು ಇಲ್ಲಿ ಸಾಮಾನ್ಯ.
ಇನ್ನು ಇಂಗ್ಲೆಂಡ್ ನಲ್ಲಿ ಕ್ರಿಕೆಟ್ ಬಗ್ಗೆ ಹೇಳುವದಾದರೆ, ಕ್ರಿಕೆಟ್ ಇಂಗ್ಲೆಂಡ್‌ನ ಅತ್ಯಂತ ಜನಪ್ರಿಯ ಕ್ರೀಡೆಗಳಲ್ಲಿ ಒಂದಾಗಿದೆ. ಕ್ರಿಕೆಟ್ ಆಟ ಇಂಗ್ಲೆಂಡ್ ನಲ್ಲೇ ಹುಟ್ಟಿದ್ದು ಎಂಬುದು ನಮಗೆಲ್ಲರಿಗೂ  ಗೊತ್ತೇ ಇದೆ. ಇದನ್ನು 16 ನೇ ಶತಮಾನದಿಂದಲೇ ಈ ದೇಶದಲ್ಲಿ ಆಡಲಾಗುತ್ತಿದೆ. ಮುಖ್ಯವಾಗಿ ಈ ಕ್ರೀಡೆ ಹುಟ್ಟಿದ್ದೇ ಎಸ್ಸೆಕ್ಸ್ ಎಂಬ ಕೌಂಟಿಯ ಒಂದು ಪ್ಯಾರಿಷ್ ವಿಲೇಜ್ ನಲ್ಲಿ.  ಕ್ರಿಕೆಟ್ ಆಟಗಾರಿಗೆ ವಿಶೇಷವಾಗಿ ಇಲ್ಲಿಯ ವಿಲೇಜ್ ಕ್ಲಬ್ ಕ್ರಿಕೆಟ್ ಆಡುವ ಒಂದು ಅನುಭವ ಅತ್ಯಂತ ರೋಮಾಂಚಕಾರಿಯಾಗಿರುತ್ತದೆ.
ನಾನು ಮೊದಲು ಈ ದೇಶಕ್ಕೆ ಬಂದಾಗ ಕ್ರಿಕೆಟ್ ಆಡುವದರ ಬದಲು ಸ್ಟೇಡಿಯಂ ಗಳಲ್ಲಿ ಮ್ಯಾಚ್ ನೋಡುವ ಆಸಕ್ತಿಯನ್ನು ಇಟ್ಟುಕೊಂಡಿದ್ದೆ. ಭಾರತ ಕ್ರಿಕೆಟ್ ತಂಡವು ಇಲ್ಲಿ ಪ್ರವಾಸಕ್ಕೆ ಬಂದಾಗೆಲ್ಲ ಲಾರ್ಡ್ಸ್, ಓವಲ್ ಅಥವಾ ಸೌಥಹಾಂಪ್ಟಾನ್ ಮೈದಾನಗಳಿಗೆ ಟಿಕೆಟ್ ಖರೀದಿಸಿ ಮ್ಯಾಚ್ ನೋಡಲು ಹೋಗುತ್ತಿದೆ.  ಆಗ ನನಗೆ ಇಲ್ಲಿಯ ಸ್ಟೇಡಿಯಂ ಗಳಿಗೆ ಹೋಗಿ ಮ್ಯಾಚ್ ನೋಡುವ ಕುತೂಹಲ ಜಾಸ್ತಿ ಇತ್ತು. 2010 ಸೆಪ್ಟೆಂಬರ್ ನಲ್ಲಿ ಗೋಡಾಲ್ಮಿಂಗ್ ಎಂಬ ಚಿಕ್ಕ ಪಟ್ಟಣಕ್ಕೆ ವಾಸಸ್ಥಳವನ್ನು  ಬದಲಾಯಿಸಿದೆ. ಗಿಲ್ಡ್ ಫೋರ್ಡ್ ನಿಂದ 3 ಮೈಲು ದೂರದಲ್ಲಿರುವ ಒಂದು ಹಳ್ಳಿಯ ತರ ಇರೋ ಚಿಕ್ಕ ಪಟ್ಟಣ ಗೋಡಾಲ್ಮಿಂಗ್. ಸುಂದರವಾದ ಈ ಪಟ್ಟಣದಲ್ಲಿ ಆಗ ನಮ್ಮ ಹೊರತು ಬೇರೆ ಯಾವ  ಭಾರತೀಯ ಪರಿವಾರವೂ ವಾಸಮಾಡುತ್ತಿರಲಿಲ್ಲ.. ಅದು ಬಿಡಿ ಒಬ್ಬ ಏಶಿಯನ್ ಕೂಡ ಕಾಣುವುದು ಇಲ್ಲಿ ವಿರಳವಾಗಿತ್ತು. ಇಂತಹ ಒಂದು ಅಪ್ಪಟ ಆಂಗ್ಲರ ಊರಲ್ಲಿ ವಾರಾಂತ್ಯ ಬಂದಾಗ ಏನು ಮಾಡುವುದು ಎಂದು ಆಗಾಗ ತಲೆ ಕೆಡುತ್ತಿತ್ತು. ಗೋಡಾಲ್ಮಿಂಗ್ ಗೆ ಬರುವ ಮುಂಚೆ ಕ್ರೋಯ್ಡನ್ ನಲ್ಲಿ  ಸಾಕಷ್ಟು ನಮ್ಮ ಕರ್ನಾಟಕದಿಂದ ಬಂದ  ಗೆಳೆಯರಿದ್ದರು ಹೀಗಾಗಿ ಅಲ್ಲಿ ರಜಾ ದಿನಗಲ್ಲಿ ಕಾಲ ಹಾಗೂ ಹೀಗೋ ಕಳೆದು ಹೋಗುತ್ತಿತ್ತು. ಈ ಸಂಧರ್ಭದಲ್ಲಿ ಆಕಸ್ಮಿಕವಾಗಿ ಒಮ್ಮೆ ೨೦೧೧ ಏಪ್ರಿಲ್ ತಿಂಗಳಲ್ಲಿ ನಾನು ಗೋಡಾಲ್ಮಿಂಗ್ ಕ್ರಿಕೆಟ್ ಕ್ಲಬ್ ಗೆ ಭೇಟಿ ಕೊಟ್ಟಾಗ ಕ್ಲಬ್ ನ ಛೇರ್ಮನ್ ತುಂಬಾ ಖುಷಿಯಿಂದ ಬರ ಮಾಡಿಕೊಂಡು ಕ್ಲಬ್ ಕ್ರಿಕೆಟ್ ಬಗ್ಗೆ ವಿವರವಾಗಿ ತಿಳಿಸಿ ಹೇಳಿದರು. ಕೂಡಲೇ ನಾನು ಗೋಡಾಲ್ಮಿಂಗ್ ಕ್ರಿಕೆಟ್ ಕ್ಲಬ್ ನ ಸದಸ್ಯತ್ವ ಪಡೆದೆ.
ಚಿಕ್ಕಂದಿನಲ್ಲೂ ಗದ್ದೆ ಬಯಲಿನಲ್ಲಿ ಹೆಡೆಪೆಂಟೆ  ಬ್ಯಾಟ್, ಚಂಡಪುಳೆ ಚೆಂಡು, ನುಕ್ಕಿಗಿಡದ ಸ್ಟಂಪು ಹೀಗೆ ನೈಸರ್ಗಿಕವಾಗಿ ಸಿಗುವ ಸಲಕರಣೆಗಳಿಂದ ನನ್ನ ತಮ್ಮನ ಹೊರತು ಹತ್ತಿರದಲ್ಲಿರುವ ನಮ್ಮ ಊರಿನ ಮಕ್ಕಳ ಜೊತೆ ಕ್ರಿಕೆಟ್ ಆಡಿದವನಾದ ನಾನು ಆಮೇಲೆ ನವೋದಯ ಶಾಲೆ ಸೇರಿದಾಗಲೇ ಪ್ಯಾಡು, ಕಾರ್ಕ್ ಚೆಂಡು, ಗ್ಲೋಸ್ಸ್ ಇತ್ಯಾದಿಗಳನ್ನು ನೋಡಿದವನು. ಇಂಜಿನಿಯರಿಂಗ್ ಮುಗಿಸಿ ಕೆಲಸ ಸೇರಿದ ಮೇಲೂ ಸರಿಯಾದ ಸೀಸನ್ ಕ್ರಿಕೆಟ್ ಬಾಲ್ ನಲ್ಲಿ ಕ್ರಿಕೆಟ್ ಆಡದ ನನಗೆ ಬರೀ ಕ್ರಿಕೆಟ್ ಪಂದ್ಯವನ್ನು ಟಿವಿ ಯಲ್ಲಿ ನೋಡಿ ಸವಿಯುವದು ಹವ್ಯಾಸವಾಗಿತ್ತು. ಆದರೆ ಟೆನಿಸ್ ಬಾಲ್ ನಲ್ಲಿ ತುಂಬಾ ಕ್ರಿಕೆಟ್ ಆಡಿದ್ದೆ! ಹೀಗೆಯೇ ನನ್ನಂತಹ ಹಳ್ಳಿಯಿಂದ ಬರುವವರು  ಪ್ಯಾಡು, ಹೆಲ್ಮೆಟ್ ಇತ್ಯಾದಿ ಉಪಕರಣಗಳ ಜೊತೆ ಕ್ರಿಕೆಟ್ ಅಡಿ ಗೊತ್ತಿಲ್ಲದೇ ಇರುವವರು ಬಹುಷಃ ಲಕ್ಷಾಂತರ ಜನರಿದ್ದಾರೆ. ಭಾರತ ಇಂದು ವಿಶ್ವದಲ್ಲೇ ಅತಿ ಪರಾಕ್ರಮಿ ಕ್ರಿಕೆಟ್ ತಂಡವಾಗಿದ್ದರೂ ದೇಶದಲ್ಲಿ ಗ್ರಾಸ್ ರೂಟ್ ಕ್ರಿಕೆಟ್ ಬೆಳವಣಿಗೆ ತುಂಬಾ ನಿಧಾನ ಗತಿಯಲ್ಲಿ ಆಗುತ್ತಿದೆ ಎಂಬುದು ನನ್ನ ಅಭಿಪ್ರಾಯ. ಇಂದಿನವರೆಗೂ ಸಾವಿರಾರು ತಾಲೂಕ ಪ್ರದೇಶಗಳಲ್ಲಿ ಒಂದು ಒಳ್ಳೆಯ ಕ್ರಿಕೆಟ್ ಸೌಲಭ್ಯವಿರುವ ಕ್ಲಬ್ ಗಳು ಇಲ್ಲದಿರುವುದು ಎದ್ದು ಕಾಣುತ್ತದೆ ಆದರೂ ಭಾರತಂತಹ ಅತಿ ದೊಡ್ಡ ಜನಸಂಖ್ಯೆಯುಳ್ಳ ದೇಶದಲ್ಲಿ ಇಂದು ಸಾವಿರಾರು ಕ್ರಿಕೆಟ್ ಪಟುಗಳು ಪ್ರತಿ ವರ್ಷ ಹೊರ ಬರುತ್ತಾರೆ ಅಂದರೆ ಈ ಕ್ರೀಡೆ ಎಷ್ಟು ಪ್ರಚಲಿತವಾಗಿ ಬಳಕೆಯಲ್ಲಿದೆ ಎಂಬುದನ್ನು ತೋರಿಸುತ್ತದೆ.
ECB ಅಥವಾ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ BCCI ಗೆ ಹೋಲಿಸಿದರೆ ಹಣಕಾಸಿನ ಪ್ರಭಲತೆಯಲ್ಲಿ ಸ್ವಲ್ಪ ದುರ್ಬಲವಾದ ಬೋರ್ಡ್. ಆದರೂ ಇಂಗ್ಲೆಂಡ್ ನಲ್ಲಿ ಗ್ರಾಸ್ ರೂಟ್ ಹಂತದಲ್ಲಿ ಕ್ರಿಕೆಟ್ ಕ್ರೀಡೆಯನ್ನು ಎಲ್ಲಾ ವಯಸ್ಸಿನವರು ಆಡುತ್ತಿರುವುದು ಇಲ್ಲಿಯ ವಿಲೇಜ್ ಕ್ರಿಕೆಟ್ ಕ್ಲಬ್ ಗಳಿಂದ ಹಾಗೂ ಕ್ಲಬ್ ಗಳಲ್ಲಿ ಇರುವ ಉತ್ತಮ ಸೌಕರ್ಯಗಳಿಂದ ಎಂದು  ಹೇಳಬಹುದು. ಪ್ರತಿಯೊಂದು ಹಳ್ಳಿಯ ಕ್ರಿಕೆಟ್ ಕ್ಲಬ್ ಗಳು ಅಗತ್ಯವಾದ ಎಲ್ಲಾ ಸುಕರ್ಯಗಳನ್ನು ಹೊಂದಿರುತ್ತವೆ. ಪ್ರತಿಯೊಂದು ಕ್ಲಬ್ ಗಳಿಗೆ ಒಬ್ಬ ಛೇರ್ಮನ್, ಸೆಕ್ರೆಟರಿ, ಖಜಾಂಶಿ, ಪಂದ್ಯ ಕಾರ್ಯದರ್ಶಿ ಹಾಗೂ ಕ್ಲಬ್ ನ ಜಾಲತಾಣವನ್ನು ನೋಡಿಕೊಳ್ಳುವದಕ್ಕೆ ಒಬ್ಬ ವೆಬ್ ಮಾಸ್ಟರ್ ಇರುತ್ತಾನೆ. ಕಿರಿಯ ಆಟಗಾರರಿಗಾಗಿ ಪ್ರತ್ಯೇಕ ಸಮಿತಿ ಮಾಡಲಾಗುತ್ತದೆ. ಪ್ರತಿಯೊಂದು ಕ್ಲಬ್ ನಲ್ಲೂ ನಿಗದಿತವಾದ ಅಂಪೈರ್ ಗಳು, ಸ್ಕೋರರ್‌ಗಳು, ಕ್ಲಬ್ ಅಭಿವೃದ್ಧಿ ಅಧಿಕಾರಿಗಳು ಇರುತ್ತಾರೆ. ಇದಲ್ಲದೇ ಮಹಿಳಾ ಕ್ರಿಕೆಟ್ ಗೂ ಕೂಡ ಇಲ್ಲಿ ಅತಿ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ನಾನು ಗೋಡಾಲ್ಮಿಂಗ್ ಕ್ರಿಕೆಟ್ ಕ್ಲಬ್ ನ ಸದಸ್ಯತ್ವ ಪಡೆದ ಮೇಲೆ ಸ್ವಯಂ ಪ್ರೇರಿತನಾಗಿ ಕ್ಲಬ್ ನ ಜಾಲತಾಣವನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದೆ. ಇದರಿಂದ ಇಲ್ಲಿಯ ಇಂಗ್ಲಿಷ್ ಕ್ಲಬ್ ಕ್ರಿಕೆಟ್ ಹೇಗೆ ನಡೆಸುತ್ತಾರೆ ಎಂಬುದರ  ಬಗ್ಗೆ ಸಾಕಷ್ಟು ಮಾಹಿತಿ ಸಿಕ್ಕಿತು.
ಇಂಗ್ಲೆಂಡ್ನಲ್ಲಿರುವ ನೂರಾರು ಕ್ರಿಕೆಟ್ ಕ್ಲಬ್ ಗಳಿಗೆ ಎಲ್ಲಿಂದ ಅನುದಾನ ಬರುತ್ತವೆ ಎಂಬುದು ಹಲವರ ಪ್ರಶ್ನೆಗಳಾಗಿರಬಹುದು. ಪ್ರತಿಯೊಂದು ಕ್ಲಬ್ ಗಳಿಗೂ  ಕ್ಲಬ್ ಪೆವಿಲಿಯನ್, ಒಳಗಡೆ ಒಂದು ಬಾರ್, ಮೈದಾನದ ಕವರ್ಸ್, ನೆಟ್ ವ್ಯವಸ್ಥೆ ಹೀಗೆ ಹಲವಾರು ಸೌಲಭ್ಯಗಳ ಪೂರೈಕೆಗೆ ಹಣಕಾಸಿನ ಅಗತ್ಯ ಇರುವುದರಿಂದ ಸಾಂಪ್ರದಾಯಿಕವಾಗಿ, ಆದಾಯದ ಮುಖ್ಯ ಮೂಲವೆಂದರೆ ವಾರ್ಷಿಕ ಸದಸ್ಯತ್ವ ಚಂದಾದಾರಿಕೆಗಳು, ಪ್ರಾಯೋಜಕತ್ವ ಮತ್ತು ನಿಧಿಸಂಗ್ರಹಣೆ ಇವೆಂಟ್ಸ್ ಗಳು. ಇದಲ್ಲದೇ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಕೂಡ ಪ್ರತಿಯೊಂದು ಕ್ಲಬ್ ಗಳಿಗೆ ಅನುದಾನ ನೀಡುತ್ತದೆ. ೧೦ ವರ್ಷಗಳ ಹಿಂದೆ ಹಲವಾರು ಕ್ಲಬ್ ಗಳು ವಿದೇಶೀ ಆಟಗಾರರನ್ನು ಇಲ್ಲಿಗೆ ಬರಮಾಡಿಕೊಂಡು ಅವರಿಗೆ ಸಂಬಳ, ಊಟ ವಸತಿ ಕೊಟ್ಟು ಕ್ಲಬ್ ಪರವಾಗಿ ಆಟವಾಡಲು ಅವಕಾಶ ಮಾಡಿ ಕೊಡುತ್ತಿತ್ತು. ಸಚಿನ್, ಸೌರವ್ ಗಂಗೂಲಿ, ದ್ರಾವಿಡ್ ಹೀಗೆ ಹಲವಾರು ಖ್ಯಾತ ಭಾರತದ ಕ್ರಿಕೆಟ್ ಪಟುಗಳು ಇಲ್ಲಿಯ ಕೌಂಟಿ ಕ್ಲಬ್ ಗಳಿಗೆ ಆಡಿ ಅನುಭವ ಪಡೆದುಕೊಂಡಿದ್ದಾರೆ. ಆದರೆ ಇಂದಿನ ದಿನಗಳಲ್ಲಿ IPL ಹಾಗೂ ರಣಜಿ ಪಂದ್ಯಗಳ ಗುಣಮಟ್ಟದಲ್ಲಿ ವೃದ್ಧಿ ಆಗಿರುವದರಿಂದ ಹಾಗೆಯೇ ಇಲ್ಲಿ ECB ಹಾಗೂ ಕೌಂಟಿ ಕ್ಲಬ್ಸ್ ಗಳಲ್ಲಿ ಹಣಕಾಸಿನ ಕೊರತೆ ಇರುವುದರಿಂದ ವಿದೇಶಿ ಆಟಗಾರರ ಭಾಗವಹಿಸುವಿಕೆ ತುಂಬಾ ಕಮ್ಮಿಯಾಗಿದೆ.
ಪ್ರತಿಯೊಂದು ಕ್ರಿಕೆಟ್ ಕ್ಲಬ್ ಆಯಾ ಪ್ರದೇಶಕ್ಕೆ ಒಳಪಡುವ ಕೌಂಟಿಗೆ ಅನುಗುಣವಾಗಿ ಕೌಂಟಿ ಚಾಂಪಿಯನ್ ಶಿಪ್ ನಲ್ಲಿ ಪ್ರತಿ ವರ್ಷ ಭಾಗವಹಿಸುತ್ತದೆ. ಉದಾಹರಣೆಗೆ ನಾನಿರುವ ಕ್ಲಬ್, ಸರ್ರೆ ಚಾಂಪಿಯನ್‌ಶಿಪ್ ನಲ್ಲಿ ನೋಂದಣಿಯಾಗಿದೆ. 1968 ರಲ್ಲಿ ಸ್ಥಾಪನೆಯಾದ ಸರ್ರೆ ಚಾಂಪಿಯನ್‌ಶಿಪ್ ಈ ವರ್ಷ ಅಂದರೆ  2021 ರ ಸೀಸನ್ ನಲ್ಲಿ ದಾಖಲೆಯ 78 ಕ್ಲಬ್ ಗಳನ್ನು ಹೊಂದಿದ್ದು 24 ವಿವಿಧ ವಿಭಾಗಗಳಲ್ಲಿ 2,106 ಪಂದ್ಯಗಳನ್ನು ಈ ವರ್ಷ ಆಯೋಜಿಸುತ್ತಿದೆ. ಪ್ರೀಮಿಯರ್ ಡಿವಿಷನ್, ಡಿವಿಷನ್ 1, 2, 3, 4 ಹೀಗೆ ವಿವಿಧ ಡಿವಿಷನ್ ಗಳಲ್ಲಿ ಕ್ಲಬ್ಸ್ ಗಳು ಭಾಗವಹಿಸುತ್ತವೆ. ಇದಲ್ಲದೇ ಟ್ವೆಂಟಿ ಟ್ವೆಂಟಿ ಕಪ್ ಗಳಲ್ಲಿ ಕೂಡ ಕ್ಲಬ್ಸ್ ಗಳು ಭಾಗವಹಿಸುತ್ತವೆ. ಪ್ರತಿ ಪಂದ್ಯದ ಸ್ಕೋರ್ ಕಾರ್ಡ್ಗಳು play-cricket.com ಎಂಬ ವೆಬ್ ಸೈಟ್ ನಲ್ಲಿ ಪ್ರಕಟವಾಗುತ್ತದೆ. ಈ ವರ್ಷ ಕೋವಿಡ್ ಕಾರಣ ಹಲವು ಬಿಗಿಯಾದ ನಿಯಮಗಳನ್ನು ಆಟಗಾರರು ಪಾಲಿಸಬೇಕಾಗಿ ಬಂದಿದೆ. ಬಹುತೇಕ ಎಲ್ಲಾ ಮ್ಯಾಚ್ ಗಳು ಮಧ್ಯಾಹ್ನ ೧೨ ಘಂಟೆಗೆ ಶುರುವಾದರೆ ಕೆಲವು ಮ್ಯಾಚ್ ಗಳು ಮಧ್ಯಾಹ್ನ ೧ ಘಂಟೆಗೆ ಶುರುವಾಗುತ್ತವೆ. ಲೀಗ್ ಮ್ಯಾಚ್ ಗಳು 50 ಓವರ್ಗಳ ಪಂದ್ಯವಾಗಿದ್ದು ಭಾನುವಾರ ಆಡುವ ಫ್ರೆಂಡ್ಲಿ ಮ್ಯಾಚ್ ಗಳು 40 ಓವರ್ಗಳಾಗಿರುತ್ತವೆ. ಕೋವಿಡ್ ನಿಯಮದ ಕಾರಣ ಕೆಲವು ಕ್ಲಬ್ಸ್ ಗಾಲ ಡ್ರೆಸ್ಸಿಂಗ್ ರೂಮ್ಸ್ ಗಳನ್ನು ಮುಚ್ಚಲಾಗಿದೆ  ಹಾಗೂ ಮಧ್ಯಾಹ್ನ ಟೀ ವ್ಯವಸ್ಥೆ ಕ್ಲಬ್ ನಲ್ಲಿ ಮಾಡಲಾಗುವದಿಲ್ಲ. ಜೊತೆಗೆ ಪ್ರತಿ 10 ಓವರ್ ನಂತರ ಬಾಲ್ ಅನ್ನು ಸ್ಯಾನಿಟೈಸ್ ಮಾಡಲಾಗುತ್ತದೆ ಹಾಗೂ ಬಾಲ್ ಗೆ ಎಂಜಲು ಅಥವಾ ಬೆವರಿನಿಂದ ಹೊಳಪು ತರುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ.
ಇಂಗ್ಲೆಂಡ್ ನಲ್ಲಿ ಕ್ರಿಕೆಟ್ ಆಡುವ ಅನುಭವವೇ ಒಂದು ರೋಮಾಂಚರಿಯಾಗಿರುತ್ತದೆ. ಬೇಸಿಗೆಯಲ್ಲಿ ವಿಶೇಷವಾಗಿ ಭಾನುವಾರದ ಫ್ರೆಂಡ್ಲಿ ಮ್ಯಾಚೆಸ್ ಆಡುವದೆಂದರೆ ವಯಸ್ಕರರು, ಯುವಕರು ಹಾಗೂ ಉದಯೋನ್ಮುಖ ಕ್ರಿಕೆಟಿಗರ ಒಂದು ಸಮ್ಮಿಲನವಾಗಿರುತ್ತದೆ. ಸರ್ರೆ ಕೌಂಟಿಯಲ್ಲಂತೂ ಅನೇಕ ಸುಂದರವಾದ ಸೊಂಪಾದ ಹಾಗೂ ಸುತ್ತಲೂ ಹಸಿರು ಕವಿದಿರುವ ಕ್ರಿಕೆಟ್ ಮೈದಾನಗಳಿವೆ. ವಿಶೇಷವಾಗಿ ಅಬಿಂಜರ್ ಕ್ರಿಕೆಟ್ ಕ್ಲಬ್, ಸರ್ರೆ ಅತ್ಯಂತ ಸುಂದರವಾದ ಮತ್ತು ಅತ್ಯುಶ್ಕ್ರಷ್ಟವಾದ  ಇಂಗ್ಲಿಷ್ ಕ್ರಿಕೆಟ್ ಮೈದಾನಗಳ ಪಟ್ಟಿಯಲ್ಲಿ ಬರುತ್ತದೆ. ೨೦೧೫ ರಲ್ಲಿ ನಾನು ಈ ಮೈದಾನದಲ್ಲಿ ಒಮ್ಮೆ ಆಡಿದ್ದೆ. ಈ ಮೈದಾನದ ವಿಶೇಷತೆಯೇನೆಂದರೆ ಇಲ್ಲಿ ಯಾರಾದರೂ ಬೌಂಡರಿ ಹೊಡೆದರೆ ಟಿಲ್ಲಿಂಗ್‌ಬೋರ್ನ್ ನದಿಯಲ್ಲಿ ಚೆಂಡು ಒದ್ದೆಯಾಗಿವುದು ಖಚಿತ. ಟಿಲ್ಲಿಂಗ್‌ಬೋರ್ನ್ ಎಂಬ ಚಿಕ್ಕ ನದಿ ಇಲ್ಲಿಯ ಮೈದಾನಕ್ಕೆ ನೈಸರ್ಗಿಕವಾದ ಬೌಂಡರಿಯಾಗಿದೆ. 2011 ರಿಂದ 2017 ರ ಸಮಯದಲ್ಲಿ ಗೋಡಾಲ್ಮಿಂಗ್ ಕ್ರಿಕೆಟ್ ಕ್ಲಬ್ ಪಂದ್ಯಗಳ ಮೂಲಕ ಹಲವಾರು ಸರ್ರೆ ಕ್ರಿಕೆಟ್ ಕ್ಲಬ್ಸ್ ಗಳಿಗೆ ಭೇಟಿ ನೀಡಿದ್ದೇನೆ. ಪ್ರತಿಯೊಂದು ಕ್ಲಬ್ ನಲ್ಲಿ ಪ್ರತ್ಯೇಕ ಬಾರ್ ಇರುವದರಿಂದ ಆಟದ ನಂತರ ಒಂದು ಪೈಂಟ್ ಬಿಯರ್ ಕುಡಿಯುತ್ತ ಅಂತರರಾಷ್ಟ್ರೀಯ ಕ್ರಿಕೆಟ್ ಬಗ್ಗೆ ಚರ್ಚೆ ಮಾಡುವುದು ಆಟಗಾರರ ಸಾಮಾನ್ಯ ವಹಿವಾಟು. ಇತ್ತೀಚಿನ ದಿನಗಳಲ್ಲಂತೂ ಅನೇಕ ಕ್ರಿಕೆಟ್ ಕ್ಲಬ್ಗಳಲ್ಲಿ ಹೆಚ್ಚು ಭಾರತೀಯ ಹಾಗೂ ಪಾಕಿಸ್ತಾನ ಮೂಲದ ಆಟಗಾರರನ್ನು ಹೊಂದಿರುವದರಿಂದ ಹಿಂದಿಯ ಅಥವಾ ಉರ್ದುವಿನ ಮಾತುಗಳು ಕೂಡ ಕ್ಲಬ್ ನಲ್ಲಿ ಹೆಚ್ಚು ಹೆಚ್ಚು ಕೇಳಬರುತ್ತವೆ. ನಾವು ಭಾರತೀಯರು ಎಲ್ಲಕ್ಕಿಂತ ಹೆಚ್ಚಾಗಿ ಕ್ರಿಕೆಟ್ ಕ್ರೀಡೆಯನ್ನು ಪ್ರೀತಿಸುವದರಿಂದ  ಇಂಗ್ಲಿಷ್ ಕ್ರಿಕೆಟ್ ಕ್ಲಬ್‌ಗಳಲ್ಲಿ ಈ ದಿನಗಳಲ್ಲಿ ನಾವು ಬಹುಸಂಖ್ಯಾತರಾಗಿರುವುದರಲ್ಲಿ ಆಶ್ಚರ್ಯವೇನಿಲ್ಲ! ಆದರೆ ಇಲ್ಲಿಯ ಸ್ಥಳೀಯರಿಗೆ ಫುಟ್ಬಾಲ್ ಅಥವಾ ರಗ್ಬಿ ಅಂದರೆ ಅದೇನೋ ವಿಶೇಷ ಪ್ರೀತಿ.
ಇಂಗ್ಲೆಂಡ್ ಕ್ರಿಕೆಟ್ ಕ್ಲಬ್ ಗಳ ವ್ಯವಸ್ಥೆಯನ್ನು ನೋಡಿದಾಗ ನನ್ನ ಪ್ರಕಾರ ಕ್ರಿಕೆಟ್ ಆಡಳಿತದ ಕ್ಷೇತ್ರದಲ್ಲಿ, ಭಾರತದ ಕ್ರಿಕೆಟ್ ಆಡಳಿತ ವರ್ಗದವರು ಬ್ರಿಟಿಷರಿಂದ ಹೇಗೆ ಪರಿಣಾಮಕಾರಿಯಾಗಿ ನೆಲ ಮಟ್ಟದಲ್ಲಿ ಕ್ರಿಕೆಟ್ ಕ್ಲಬ್ಸ್ ಮೂಲಕ ಕ್ರೀಡೆಯನ್ನು ಪೋಷಿಸಬಹುದು ಎಂದು ತುಂಬಾ ಕಲಿಯಬೇಕಾಗಿದೆ. ಆದ್ದರಿಂದ ಬಿಸಿಸಿಐ ಗೆ ಮುಂದಿನ ದಿನಗಳಲ್ಲಿ ದೇಶದ ಗ್ರಾಮೀಣ ಕ್ರಿಕೆಟ್ ಮೂಲಸೌಕರ್ಯದಲ್ಲಿ ಹೆಚ್ಚಿನದಾಗಿ ಹೂಡಿಕೆ ಅಥವಾ ಅನುದಾನಗಳನ್ನು ನೀಡುವ ಮೂಲಕ ಹಾಗೂ ಹೆಚ್ಚು ಹೆಚ್ಚು ಗ್ರಾಮೀಣ ಮಕ್ಕಳಿಗೆ ಸರಿಯಾದ ಅವಕಾಶಗಳನ್ನು ಕಲ್ಪಿಸುವದರ ಮೂಲಕ ಕ್ರಿಕೆಟ್ ಕ್ರೀಡೆಯನ್ನು ವೃತ್ತಿಯಾಗಿ ಅಳವಡಿಸಿಕೊಳ್ಳಲು ಯುವಕರನ್ನು ಪ್ರೇರೇಪಿಸಬಹುದು ಅದರಿಂದ ಇನ್ನೂ ಹೆಚ್ಚಿನ ಮಹೇಂದ್ರ ಸಿಂಗ್ ಧೋನಿಯಂತಹ ಅದ್ಭುತ ಪ್ರತಿಭೆಗಳು ಭಾರತವನ್ನು ಪ್ರತಿನಿಧಿಸಿ ಅಂತಾರಾಷ್ಟ್ರೀಯ ಕ್ರಿಕೆಟ್ ಅಂಕಣಕ್ಕೆ ಬರಬಹುದು ಎಂಬುದು ನನ್ನ ಅಭಿಪ್ರಾಯ. ಅಂತಹ ಪ್ರತಿಭೆಗಳು ಭಾರತದಿಂದ ಇಂಗ್ಲೆಂಡಿಗೆ ಆಡಲು ಬಂದಾಗ ನಾವೂ ಕೂಡ ಇಲ್ಲಿ ಹೆಮ್ಮೆಯಿಂದ ಎದೆ ತಟ್ಟಿ ಗರ್ವದಿಂದ ನಮ್ಮ ಭಾರತ ದೇಶದ ಕ್ರಿಕೆಟ್ ಮೂಲಸೌಕರ್ಯಗಳ ಬಗ್ಗೆ ಹೇಳಿಕೊಳ್ಳಬಹುದು. ಹಾಗೆಯೇ ಈ ಜೂನ್ ೧೮ ರಂದು ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಜಯ ಗಳಿಸಲಿ ಎಂದು ನಾವೆಲ್ಲರೂ ಶುಭ ಹಾರೈಸೋಣ.
ಗಣಪತಿ ಭಟ್
ಲಂಡನ್, ಯುನೈಟೆಡ್ ಕಿಂಗ್ಡಮ್

Comments

comments