ಸ್ನೇಹಿತರೇ ನಮಸ್ಕಾರ.
ತುಂಬಾ ದಿನಗಳ ನಂತರ ನನಗೆ ಒಂದು ಬ್ಲಾಗ್ ಬರೆಯುವ ಅವಕಾಶ ಸಿಕ್ಕಿದೆ. ಇತ್ತೀಚಿಗೆ ವಾರ ಪೂರ್ತಿ ಆಫೀಸ್ ಕೆಲಸದಲ್ಲಿ ಮಗ್ನನಾಗಿ, ವಾಟ್ಸಪ್ಪ್ಗಳಲ್ಲಿ ಕನ್ನಡ ಇವೆಂಟ್ಸ್ ಬಗ್ಗೆ ಮಾಹಿತಿ ಕೊಡುವುದು, ಬುಧವಾರ ರಾತ್ರಿ KUK ಕಮಿಟಿ ಮೀಟಿಂಗ್, ಕನ್ನಡ ಕಲಿ ಬಗ್ಗೆ ಸಾಕಷ್ಟು ಪ್ರಶ್ನೆಗಳಿಗೆ ಉತ್ತರ ಕೊಡುವುದರ ಬಿಟ್ಟು ವಾರದ ಕೊನೆಯಲ್ಲಿ ಯೋಗ ಶಿಬಿರ, ಕಾಫಿ ಜೊತೆ ಮಾತುಕತೆ ಹೀಗೆ ಸಾಕಷ್ಟು ಸಮಯ ಇಂತಹದರಲ್ಲೇ ಹೋಗುವದರಿಂದ ಈ ಬ್ಲಾಗ್ ಬರೆಯುವ ಚಟ ತಪ್ಪಿ ಹೋಗಿತ್ತು.
ಕಳೆದ ೬ ತಿಂಗಳಿಂದ ಈ ಕೋವಿಡ್ ಮಹಾಮಾರಿ ನಮ್ಮ ಬದುಕನ್ನೇ ಬದಲಾಯಿಸಿಬಿಟ್ಟಿದೆ. ಎಲ್ಲಿ ನೋಡಿದರೂ zoom ಮೀಟಿಂಗ್ಸ್ ಗಳು, ಆಫೀಸ್ ನಲ್ಲೂ ಕಾನ್ಫರೆನ್ಸ್ ಕಾಲ್ಸ್ ಮತ್ತು ನಮ್ಮ ಕಂಮ್ಯುನಿಟಿಗಳಲ್ಲೂ zoom ಮೀಟಿಂಗ್ಸ್ ಮೇಲೆ zoom ಮೀಟಿಂಗ್ಸ್. ಯಾವ ಮಟ್ಟಕ್ಕೆ ಕನ್ನಡದ ಬೆಳವಣಿಗೆ ಆಗಿದೆ ಅಂದರೆ, zoom ಲೈಸೆನ್ಸ್ ಪಡೆದು zoom ಮೀಟಿಂಗ್ಸ್ ಆಯೋಜಿಸಿ ಲೋಕದ ಎಲ್ಲಾ ಮುಖಂಡರನ್ನು ಒಬ್ಬರ ನಂತರ ಒಬ್ಬರನ್ನು ಒಟ್ಟುಹಾಕಿ ಒಂದು ಒಂದು ಅಂತರ್ಜಾಲದಲ್ಲಿ ಪ್ರಚಲಿತವಿರುವ ಸಂಘವನ್ನೇ ಕಟ್ಟಬಹುದು ಎಂಬುದನ್ನು ಕೋವಿಡ್ ಸಮಯ ತೋರಿಸಿಕೊಟ್ಟಿದೆ. ಜನ ಎಷ್ಟೇ ಬರಲಿ, ವಾರಕ್ಕೊಂದು zoom ಮೀಟಿಂಗ್ ಮಾಡಿ ದೇಶ ವಿದೇಶಗಳ ಜನರನ್ನು ಒಟ್ಟು ಹಾಕುವ ಕಲ್ಪನೆಯನ್ನು ಧಿಡೀರನೆ ನಿರ್ಧರಿಸಿ ಅದನ್ನು ಕೂಡಲೇ ಕಾರ್ಯಗತ ಮಾಡಬಹುದು.
ಕೋವಿಡ್ ಬರುವ ಮುನ್ನ ಒಂದು ಯುಗಾದಿಯಾಗಲಿ, ದೀಪಾವಳಿಯಾಗಲಿ, ಅಥವಾ ರಾಜ್ಯೋತ್ಸವವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವದಿದ್ದರೆ ಸಾಕಷ್ಟು ಪರಿಶ್ರಮ ಪಡಬೇಕಿತ್ತು ಆದರೆ ಇಂದು ಒಂದು zoom ಲೈಸೆನ್ಸ್ ಇದ್ದರೆ ಸಾಕು, ಫೇಸ್ಬುಕ್ ಪೇಜ್ ಅಥವಾ ಗ್ರೂಪ್ ಇದ್ದರೆ ಸಾಕು, ಥಟ್ ಎಂದು ಒಂದು ಪ್ರೋಗ್ರಾಮ್ ಧಿಡೀರನೆ ಅನೌನ್ಸ್ ಮಾಡಿ ಯಾವ ಯಾವ ಗ್ರೂಪ್ಸ್ಗಳಿಗೆ ಮೆಸೇಜ್ ಮಾಡುವ ಅನುಮತಿ ಇದೆಯೋ ಅಲ್ಲೇಲ್ಲಾ ಮೆಸೇಜ್ ಮಾಡಿ ಎಲ್ಲಾ ತರಹದ ಕಾರ್ಯಕ್ರಮಗಳನ್ನು ಆಯೋಜಿಸಬಹುದು!
ಇಂತಹ ಒಂದು ಪರಿಸ್ಥಿಯಲ್ಲಿ ನಮ್ಮ ಕನ್ನಡಿಗರುಯುಕೆ ತಂಡದಲ್ಲಿ ಬಂದಿರುವ ವಿಚಾರ ಆನ್ಲೈನ್ ಕನ್ನಡ ಕಲಿ ಶಿಬಿರ. ಈಗಾಗಲೇ ಹಲವಾರು ಕೇಂದ್ರಗಳಲ್ಲಿ ಕನ್ನಡ ಕಲಿ ಶಿಬಿರವನ್ನು KUK ಸತತವಾಗಿ ನಡೆಸಿಕೊಂಡು ಬರುತ್ತಿರುವುದು ಗೊತ್ತಿರುವ ವಿಷಯ. ಈ ಶಿಬಿರಗಳು ಸಾಮಾನ್ಯವಾಗಿ ಒಂದು ಕ್ಲಾಸ್ ರೂಮ್ ಬಾಡಿಗೆಗೆ ತೆಗೆದುಕೊಂಡು ಒಂದು ಘಂಟೆಯ ಕಾಲ ಮಕ್ಕಳಿಗೆ ಕನ್ನಡ ಕಲಿಸುವ ಪ್ರಯತ್ನವಾಗಿತ್ತು. ಈ ಕೋವಿಡ್ ಕಾರಣ ಎಲ್ಲಾ ಕ್ಲಾಸ್ ರೂಮ್ ಶಿಬಿರಗಳು ಆನ್ಲೈನ್ ಮೂಲಕ ಕನ್ನಡ ಕಲಿಸಲು ಪ್ರಾರಂಭಿಸಿದವು. ಆದರೆ ಯುಕೆ ಆದ್ಯಂತ ಸಾಕಷ್ಟು ಕನ್ನಡ ಕಲಿ ಶಿಬಿರಗಳಿಗೆ ಬೇಡಿಕೆ ಬರುತ್ತಲೇ ಇತ್ತು. ಹ್ಯಾರೋ, ಮಿಲ್ಟನ್ ಕೇನ್ಸ್, sutton ಗಳಲ್ಲಿ ಆಗಲೇ ಸಾಕಷ್ಟು ಮಕ್ಕಳು ಕನ್ನಡ ಕಲಿಯುತ್ತಿರುವದರಿಂದ ಯುಕೆ ಆದ್ಯಂತ ಶಿಬಿರಗಳಿಗೆ ಒಂದು ಕ್ರಮಬದ್ಧವಾದ ರೂಪು ರೇಷೆ ಕೊಟ್ಟು ಸರಿಯಾಗಿ ನಡೆಸಿದರೇ ಉತ್ತಮ ಎಂದು ಅನಿಸಿದಾಗ ಹತ್ತಾರು ಸ್ವಯಂ ಪ್ರೇರಿತ ಶಿಕ್ಷಕಿಯರು ಮುಂದು ಬಂದಿದ್ದು ನಮ್ಮ ಅದೃಷ್ಟ. ಈಗ ಕನ್ನಡಿಗರುಯುಕೆ ಆನ್ಲೈನ್ ಕನ್ನಡ ಕಲಿ ಕೇಂದ್ರದಲ್ಲಿ 67 ಮಕ್ಕಳು 12 ಶಿಕ್ಷಕಿಯರಿಂದ ಕನ್ನಡ ಕಲಿಯುತ್ತಿರುವುದು ಕೋವಿಡ್ ಮಾಡಿಕೊಟ್ಟಿರುವ ವಿಶೇಷ ಅವಕಾಶ ಎಂದು ಹೇಳಲು ಹೆಮ್ಮೆಯಾಗುತ್ತಿದೆ. ದಿನಾಂಕ ೩೦ ನೇ ಸೆಪ್ಟೆಂಬರ್ ಕನ್ನಡ ಪ್ರಾಧಿಕಾರದ ಪ್ರಸ್ತುತಿಯಲ್ಲಿ ಲಾಂಚ್ ಮಾಡಿ ಈಗ ಕನ್ನಡ ಅಕಾಡೆಮಿ ಮೂಲಕ ಅಧಿಕೃತ ಟ್ರೇನಿಂಗ ಪಡೆದು ವಾರಕ್ಕೆ ೧೦ಕ್ಕಿಂತ ಹೆಚ್ಚು ಆನ್ಲೈನ್ ಕ್ಲಾಸ್ ಗಳು ಬೇರೆ ಬೇರೆ ಸಮಯದಲ್ಲಿ ನಡೆಯುತ್ತಿದ್ದು, ಕನ್ನಡಿಗರುಯುಕೆ ಹಮ್ಮಿಕೊಂಡಿರುವ ಕನ್ನಡ ಕಲಿ ಕಾರ್ಯಕ್ರಮದ ಒಂದು ವಿಶೇಷ ಮೈಲಿಗಲ್ಲು ಎಂದು ಹೇಳಿದರೆ ತಪ್ಪೇನಿಲ್ಲ ಅನ್ನಿಸುತ್ತಿದೆ. ಈಗಾಗಲೇ phase 1 ಶುರುವಾಗಿದ್ದು, phase 2 ಸದ್ಯದಲ್ಲೇ ಶುರುವಾಗುವ ಸಾಧ್ಯತೆಯಿದೆ.
ಈ ಒಂದು ಶುಭ ಕಾರ್ಯಕ್ಕೆ ಮುಂದೆ ಬಂದಿರುವ ಎಲ್ಲಾ ಶಿಕ್ಷಕ ಶಿಕ್ಷಕಿಯರಿಗೂ, ತಮ್ಮ ಮುಂದಿನ ಪೀಳಿಗೆಗೆ ಕನ್ನಡ ಕಲಿಸುವ ಒಂದು ಛಲವಿಟ್ಟು ಮುಂದೆ ಬಂದಿರುವ ಪೋಷಕರಿಗೂ ನನ್ನ ಒಂದು ದೊಡ್ಡ ಸಲಾಂ.
ಹೀಗೆಯೇ ಈ ಕನ್ನಡ ಕಲಿ ಕಾರ್ಯ ಮುಂದುವರಿಯಲಿ, ಸಾಕಷ್ಟು ಯುಕೆ ಕನ್ನಡಿಗರು ತಮ್ಮ ಮಕ್ಕಳಿಗೆ ಕನ್ನಡ ಕಲಿಸುವ ಪ್ರಯತ್ನವನ್ನು ಇನ್ನಷ್ಟು ಪ್ರಭಲವಾಗಿ ಕೈಗೊಳ್ಳಲಿ ಎಂದು ಆಶಿಸುತ್ತಾ ನಿಮಗೆಲ್ಲಾ ಶುಭ ವಾರ ಕೋರುತ್ತೇನೆ.
ಕನ್ನಡವೇ ಸತ್ಯ, ಕನ್ನಡವೇ ನಿತ್ಯ!
ಸಿರಿಗನ್ನಡಂ ಗೆಲ್ಗೆ