ನಂದಿನಿ ರಾವ್ ಗುಜಾರ್ – ಕರ್ನಾಟಕ ಶಾಸ್ತ್ರೀಯ ಹಾಗೂ ಭಕ್ತಿ ಸಂಗೀತದ ದಿವ್ಯ ಜ್ಯೋತಿ

Republishing the article published on Kannada Prabha

ಇಂದಿನ ಪಾಪ್, ಹಿಪ್-ಹಾಪ್ ಮತ್ತು ಸ್ವತಂತ್ರ ಸಂಗೀತಗಾರರ ಜಗತ್ತಿನಲ್ಲಿ ನಮ್ಮ ಕನ್ನಡದ ಒಬ್ಬ ಮಹಿಳೆ ಕರ್ನಾಟಕ ಶಾಸ್ತ್ರೀಯ ಹಾಗೂ ಭಕ್ತಿ ಸಂಗೀತದಲ್ಲಿ ತಮ್ಮದೇ ಆದ ಒಂದು ವಿಶಿಷ್ಟ ಗುರುತನ್ನು ಹಿಂದುಸ್ಥಾನಿ ಸಂಗೀತದ ರಾಜಧಾನಿಯಾದ ಪುಣೆಯಿಂದ ಜಗತ್ತಿಗೆ ಪಸರಿಸುತ್ತಿದ್ದಾರೆ ಎಂದರೆ ಸಾಮಾನ್ಯದ ವಿಷಯವಲ್ಲ. ತನ್ನ ಅನನ್ಯ ಅತೀಂದ್ರಿಯ ಧ್ವನಿಗೆ ಹೆಸರುವಾಸಿಯಾದ ಇವರೇ ವಿಧುಷಿ ನಂದಿನಿ ರಾವ್ ಗುಜಾರ್.  ಹಲವಾರು ವರ್ಷಗಳ ಸಾಧನೆ ಮಾಡಿ ಇಂದು ನಂದಿನಿ ರಾವ್ ಅವರು ಕರ್ನಾಟಕ ಮತ್ತು ಭಕ್ತಿ ಸಂಗೀತದ ಮುಂದಿನ ಪೀಳಿಗೆಗೆ ಆದರ್ಶವಾಗಿರುವಂತಹ ಪ್ರತಿಭೆ ಆಗಿದ್ದಾರೆ. ಪ್ರತಿಯೊಬ್ಬ ಪ್ರೇಕ್ಷಕರನ್ನೂ ಸೆರೆಹಿಡಿಯುವ ಕಲಾ ಕುಶಲತೆಯೊಂದಿಗೆ, ಅಲ್ ಇಂಡಿಯಾ ರೇಡಿಯೋ ‘ಎ ಗ್ರೇಡ್ ‘ ಕಲಾವಿದೆಯಾಗಿರುವ ನಂದಿನಿ 12 ವಿವಿಧ ಭಾಷೆಗಳಲ್ಲಿ ಮತ್ತು ಭಕ್ತಿ ಸಂಗೀತದ ಶೈಲಿಗಳಲ್ಲಿ ಉನ್ನತ ದರ್ಜೆಯ ಪ್ರದರ್ಶನ ನೀಡುತ್ತಾರೆ. ಕನ್ನಡ ದಾಸರಪದದಲ್ಲಿ ಅವರ ಕೌಶಲ್ಯದ ಜೊತೆಗೆ, ಗುರುಬಾನಿ, ಕೀರ್ತನೆ, ಅಭಂಗಸ್, ರವೀಂದ್ರ ಸಂಗೀತ ಮತ್ತು ಇನ್ನಿತರ ಭಕ್ತಿ ರೂಪಗಳನ್ನು ಅನುಸರಿಸಿ, ಬರೀ ಭಾರತವಲ್ಲದೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಲಿತರಾಗಿದ್ದಾರೆ.


ನಂದಿನಿ ಅವರು ಹುಟ್ಟಿದ್ದು ಕರ್ನಾಟಕ ರಾಜ್ಯದ ಉಡುಪಿ ಮತ್ತು ಮಂಗಳೂರಿನ ಮದ್ಯ ಇರುವ ಪಡುಬಿದ್ರಿ ಎಂಬ ಕರಾವಳಿ ತೀರದಲ್ಲಿರುವ ಚಿಕ್ಕ ಪಟ್ಟಣದಲ್ಲಿ. ಇವರ ತಂದೆ ದಿವಂಗತ ಶ್ರೀ ಜಗದೀಶ್ ರಾವ್ ಹಾಗೂ ತಾಯಿ ಶ್ರೀಮತಿ ಪೃತ್ವಿ ರಾವ್. ಹದಿಹರೆಯದ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡ ನಂದಿನಿ ವಿದ್ಯಾಭ್ಯಾಸ ಮಾಡಿದ್ದು ಶಿವಮೊಗ್ಗ ಹಾಗೂ ಬೆಂಗಳೂರಿನಲ್ಲಿ. ನಂದಿನಿ ಅವರು ಸಂಗೀತದಲ್ಲಿ ಸ್ನಾತಕೋತ್ತರ ಪದವಿ ಮತ್ತು ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂಬಿಎ ಪಡೆದಿದ್ದಾರೆ. ಇವರ ಅಣ್ಣ ಸಂದೇಶ್ ರಾವ್ ಐರ್ಲೆಂಡ್ ನ ಡಬ್ಲಿನ್ ನಲ್ಲಿ ವಾಸವಾಗಿದ್ದಾರೆ ಹಾಗೂ ಅಕ್ಕ ಸೀಮಾ ರಾವ್ ಕೆನಡಾ ದಲ್ಲಿ ವಾಸವಾಗಿದ್ದಾರೆ. ಮನೆಯಲ್ಲಿ ಯಾರೂ ಸಂಗೀತದ ಹಿನ್ನೆಲೆಯಿಂದ ಬಂದವರಲ್ಲ ಹೀಗಾಗಿ ನಂದಿನಿ ಅವರು ಅವರ ಪರಿವಾರದಲ್ಲಿ ಮೊದಲ ತಲೆಮಾರಿನ ಸಂಗೀತಗಾರ್ತಿ ಎಂದು ಹೇಳಬಹುದು. ನನ್ನ ತಾಯಿ ಶ್ರೀಮತಿ ಪೃತ್ವಿ ರಾವ್ ಇದುವರೆಗೂ ನನ್ನ ಬೆಂಬಲದ ಮುಖ್ಯ ಆಧಾರಸ್ತಂಭವಾಗಿದ್ದಾರೆ ಮತ್ತು ಇಲ್ಲಿಯವರೆಗೂ ನನ್ನ ಅತಿದೊಡ್ಡ ವಿಮರ್ಶಕಿ ಮತ್ತು ಅಂಗರಕ್ಷಕಿ ಕೂಡ ಆಗಿದ್ದಾರೆ ಎಂದು ನಂದಿನಿ ಭಾವನಾತ್ಮಕವಾಗಿ ಹೇಳುತ್ತಾರೆ. ನಂದಿನಿ ಅವರ ಪತಿ ಪೂರಬ್ ಗುಜಾರ್ ಅವರು ಮಾಹಿತಿ ತಂತ್ರಜ್ಞಾನ ಮತ್ತು ಹೂಡಿಕೆ ಸಂಸ್ಥೆಯನ್ನು ಪುಣೆಯಲ್ಲಿ ಒಬ್ಬ ಯಶಸ್ವಿ ಉದ್ಯಮಿಯಾಗಿ ನಡೆಸುತ್ತಿದ್ದು, ಇವರ ೯ ವರ್ಷದ ಮಗ ವೇದ್ ಗುಜಾರ್ ವಿಜ್ಞಾನದಲ್ಲಿ ಅತ್ಯಂತ ಆಸಕ್ತಿ ಹೊಂದಿರುತ್ತಾನೆ. ಮದುವೆಯಾದ ನಂತರ ಗುಜರಾತೀ ಪರಿವಾರದೊಂದಿಗೆ ಬೆರೆತು ಮಹಾರಾಷ್ತ್ರದ ಪುಣೆಗೆ ಕಾಲಿಟ್ಟ ನಂದಿನಿ ಇಂದು ಹೊರನಾಡಿನ ಕನ್ನಡತಿಯಾಗಿ ತಮ್ಮ ವಾಸಸ್ಥಳವಾದ ಪುಣೆಯಿಂದ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಜೊತೆಗೆ ಕನ್ನಡದ ಕಂಪನ್ನು ಪಸರಿಸುತ್ತಿದ್ದಾರೆ. ಗುಜರಾತಿ ಕುಟುಂಬದಲ್ಲಿದ್ದು, ಹೊರನಾಡಿನ ಪುಣೆಯಲ್ಲಿದ್ದೂ ಅವರ ಮಗ ವೇದ್ ನಿರರ್ಗಳವಾಗಿ ಕನ್ನಡ ಮಾತನಾಡುತ್ತಾನೆ ಅಂದರೆ ಕನ್ನಡ ಕಲಿಕೆಗೆ ತಾಯಿಯೇ ಮೊದಲ ಪಾಠಶಾಲೆ ಎಂಬುದನ್ನು ಪ್ರತಿಬಿಂಬಿಸುತ್ತದೆ.
ನಂದಿನಿ ಅವರು ಚೈಲ್ಡ್ ಪ್ರಾಡಿಜಿಯಾಗಿ ಸಂಗೀತ ರಂಗದಲ್ಲಿ 6 ನೇ ವಯಸ್ಸಿನಲ್ಲೇ ತಮ್ಮ ಮೊದಲ ಸಾರ್ವಜನಿಕ ಪ್ರದರ್ಶನವನ್ನು ನೀಡಿದವರು. ಶಿವಮೊಗ್ಗದಲ್ಲಿರುವಾಗ ದಿವಂಗತ ಶ್ರೀ ಪ್ರಸನ್ನ ವೆಂಕಟೇಶ್ ಗುರುಗಳ ಆಶ್ರಯದಲ್ಲಿ ಸಂಗೀತಾಭ್ಯಾಸ ಮಾಡಿದ ನಂದಿನಿ, ತಮ್ಮ ಮೊದಲ ಸಾರ್ವಜನಿಕ ಸಂಗೀತ ಪ್ರದರ್ಶನವನ್ನು 11 ವರ್ಷವಾಗಿರುವಾಗಲೇ ಕುವೆಂಪು ರಂಗಮಂದಿರದಲ್ಲಿ ನೀಡಿದ ಅನುಭವವನ್ನು ಇಂದಿಗೂ ಸ್ಮರಿಸಿಕೊಳ್ಳುತ್ತಾರೆ.  11 ನೇ ವಯಸ್ಸಿನಲ್ಲಿ ನೀಡಿದ ಆ ಒಂದು ಕಾನ್ಸರ್ಟ್ ಅತ್ಯಂತ ಸ್ಮರಣೀಯವಾದದ್ದು ಹಾಗೂ ಅಲ್ಲಿ ನಾನು ಭರವಸೆಯ ಮೊಳಕೆಯ ಕಲಾವಿದೆ ಎಂದು ಸಾಬೀತುಪಡಿಸಲು ಪ್ರಯತ್ನಿಸುತ್ತಿದ್ದೆ ಮತ್ತು ಅದಾದ ನಂತರವೇ ನನ್ನ ಆಲೋಚನೆಗಳು ಸಾಕಷ್ಟು ಪ್ರಬುದ್ಧವಾಗತೊಡಗಿತು ಎನ್ನುತ್ತಾರೆ. ಅದಾದ ನಂತರ ಪ್ರತಿಯೊಂದು ಅಭ್ಯಾಸ ಕ್ಷಣಗಳನ್ನು, ಪ್ರದರ್ಶನಗಳನ್ನು ಇಷ್ಟಪಡುತ್ತಾ ಬಂದೆ, ನಾನು ಪ್ರೀತಿಸುವದನ್ನು ಅನುಸರಿಸಲು ಮತ್ತು ನನ್ನ ಸಂಗೀತವನ್ನು ಕೇಳುವ ಎಲ್ಲರಿಗೂ ಪ್ರೀತಿ ಮತ್ತು ಸಂತೋಷವನ್ನು ಹರಡಲು ದೇವರು ನನ್ನನ್ನೇ ಆಯ್ಕೆಮಾಡಿಕೊಟ್ಟಿದ್ದಕ್ಕೆ ಅತ್ಯಂತ ಸಂತೋಷವಾಗಿದೆ ಎಂದು ನಂದಿನಿ ಅವರು ಹಳೆಯ ನೆನಪುಗಳನ್ನು ಮರುಕಳಿಸಿ ಹೇಳುತ್ತಾರೆ. ಭಾರತೀಯ ಸಂಸ್ಕೃತಿಯಲ್ಲಿ ಗುರು-ಶಿಷ್ಯ ಪರಂಪರೆಗೆ ವಿಶಿಷ್ಟ ಸ್ಥಾನವಿದೆ. ತಮ್ಮ ಸಂಗೀತ ಕಲೆಯ ಶ್ರೇಯಸ್ಸಿಗೆ ಹಲವಾರು ಗುರುಗಳ ಆಶೀರ್ವಾದವಿರುವುದರಿಂದ ಇಂದಿಗೂ ನಂದಿನಿ ಚೆನ್ನೈ ನಲ್ಲಿ ವಾಸವಾಗಿರುವ ವಿದುಶಿ ರಂಜನಿ ಗಾಯತ್ರಿ ಮತ್ತು ಬೆಂಗಳೂರಿನ ವಿದುಶಿ ಪ್ರೊಫೆಸರ್ ನಾಗಮಣಿ ಶ್ರೀನಾಥ್ ಅವರ ಅಡಿಯಲ್ಲಿ ಸಂಗೀತ ತರಬೇತಿ ಮುಂದುವರಿಸಿದ್ದಾರೆ. ಅವರ ಗುರುಗಳಾದ ವಿದ್ವಾನ್ ಬೇಲಕ್ವಾಡಿ ಅವರ ಕೊಡುಗೆಗಳಿಗೆ ಅಪಾರ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಾರೆ. ಆರ್. ಶ್ರೀಧರ್, ಮತ್ತು ಶಿವಮೊಗ್ಗದ ದಿವಂಗತ ವಿದ್ವಾನ್ ಪ್ರಸನ್ನ ವೆಂಕಟೇಶ್ ಹೀಗೆ ಪ್ರತಿಯೊಬ್ಬರೂ ನಂದಿನಿ ಅವರನ್ನು ಒಬ್ಬ ಅತ್ತ್ಯುತ್ತಮ ಸಂಗೀತಗಾರ್ತಿ ಎಂದು ರೂಪಿಸುವದರಲ್ಲಿ ಪಾತ್ರರಾಗಿರುವುದು ವಿಶೇಷ. 

ಕಳೆದ 25 ವರ್ಷಗಳಲ್ಲಿ, ನಂದಿನಿ ಅವರು ಭಾರತ ಮತ್ತು ವಿಶ್ವದಾದ್ಯಂತ 1500 ಕ್ಕೂ ಹೆಚ್ಚು ಕರ್ನಾಟಕ ಸಂಗೀತ ಕಚೇರಿಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಭಾರತದ ಅನೇಕ ನಗರಗಳಲ್ಲೊಂದಲ್ಲದೇ, ಯುಎಸ್ಎ, ಕೆನಡಾ, ಇಂಗ್ಲೆಂಡ್, ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್‌ಗಳಲ್ಲಿನ ಅನಿವಾಸಿ ಭಾರತೀಯರಿಗೆ ಅವರ ಸಂಗೀತವನ್ನು ಕೊಂಡೊಯ್ದಿದ್ದಾರೆ. ಹಲವಾರು ಕನ್ನಡ ಚಾನೆಲ್ ಗಳಲ್ಲಿ ಪ್ರದರ್ಶನ ಮತ್ತು ಲೈವ್ ಷೋಗಳನ್ನು ನೀಡಿರುವ ನಂದಿನಿ ರಾವ್ ಅವರ ಸುಮಾರು 100ಕ್ಕೂ ಹೆಚ್ಚು ಸಿಡಿ ಗಳು ಧ್ವನಿಮುದ್ರಣಗೊಂಡಿವೆ. ಕರ್ನಾಟಕ ಶಾಸ್ತ್ರೀಯ ಹಾಗೂ ಭಕ್ತಿ ಸಂಗೀತದಲ್ಲಿ ಒಬ್ಬ ಸ್ವತಂತ್ರ ಸಂಗೀತಗಾರರಾಗಿ ಅಷ್ಟೊಂದು ಪ್ರಧರ್ಶನ ನೀಡಿರುವುದು ಸಾಮಾನ್ಯದ ವಿಷಯವಲ್ಲ. ನಂದಿನಿ ಅವರನ್ನು ನಾವು ಹೊಸ ತಲೆಮಾರಿನ ಕಲಾವಿದೆ ಎನ್ನಬಹುದು ಯಾಕೆಂದರೆ ಕರ್ನಾಟಕ ಶಾಸ್ತ್ರೀಯ, ಭಕ್ತಿ ಸಂಗೀತ, ದಕ್ಷಿಣಾದಿ, ಉತ್ತರಾದಿ, ಸೂಫಿ, ಜಾನಪದ, ದಾಂಡಿಯ, ಸುಗಮ ಸಂಗೀತ, ಭಾವಗೀತೆಗಳು, ಫಿಲ್ಮಿ ಸಂಗೀತ, ಪಾಶ್ಚಾತ್ಯ, ಫ಼್ಯೂಜನ್ ಹೀಗೆ ಯಾವುದೇ ಶೈಲಿಯಲ್ಲೂ ಸಮರ್ಥವಾಗಿ ಹಾಡಿ ಮತ್ತೆ ಮತ್ತೆ ಕೇಳುವಂತೆ ಕೇಳುಗರ ಮನಸ್ಸನ್ನು ಮೋಡಿ ಮಾಡುತ್ತಾರೆ. ಕಚೇರಿ ನೋಡಿದರೆ ಮತ್ತೆ ಹೋಗುವಂತೆ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸುತ್ತಾರೆ. ೨೦೧೮ ರಲ್ಲಿ ವಸಂತೋತ್ಸವ ಕಾರ್ಯಕ್ರಮದಲ್ಲಿ ಲಂಡನ್ ನಲ್ಲಿ ಅವರು ಕನ್ನಡಿಗರುಯುಕೆ ಮೂಲಕ ನೀಡಿದ ಸಂಗೀತ ಸಭೆಗೆ ಬಂದ ವೀಕ್ಷಕರು ಇಂದಿಗೂ ನಂದಿನಿ ಅವರು ಮತ್ತೆ ಯುನೈಟೆಡ್ ಕಿಂಗ್ಡಮ್ ಯಾವಾಗ ಬರುತ್ತಿದ್ದಾರೆ ಎಂದು ವಿಚಾರಿಸುತ್ತಿರುತ್ತಾರೆ. ಅವರ ಪ್ರಖ್ಯಾತಿಗೆ ಇಂದೊಂದು ನೈಜ ಉದಾಹರಣೆ.ನಂದಿನಿ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಜನಪ್ರಿಯವಾಗಿದ್ದು, ಫೇಸ್‌ಬುಕ್ ಲೈವ್ ಮೂಲಕ ತನ್ನ ಅಭಿಮಾನಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತಾರೆ. ಅವರ ಯೂಟ್ಯೂಬ್ ವೀಡಿಯೊಗಳು 10 ಮಿಲಿಯನ್ ಗೂ ಹೆಚ್ಚು ವೀಕ್ಷಣೆಗಳನ್ನು ಹೊಂದಿವೆ. ಇದಲ್ಲದೆ ಅವರ ಅನೇಕ ಯೂಟ್ಯೂಬ್ ಸರಣಿಗಳು ಹೊರಬಂದಿವೆ. ಅವುಗಳಲ್ಲಿ ಟೆಂಪಲ್ಸ್ ಆಫ್ ಇಂಡಿಯಾ, ಮ್ಯೂಸಿಕ್ ಆಫ್ ಕರ್ನಾಟಕ, ಮತ್ತು ಹರಿದಾಸ ಸಾಹಿತ್ಯ ಹೀಗೆ ಹಲವಾರು ವಿಭಾಗಗಳಲ್ಲಿ ಸಂಗೀತವನ್ನು ಸಂಯೋಜಿಸಿದ್ದಾರೆ. ವಿವಿಧ ಥೀಮ್ಗಳ ಮೂಲಕ ಭಾರತದ ಸಂಸ್ಕೃತಿಯನ್ನು ಇಂದಿನ ಪೀಳಿಗೆಗಳಿಗೆ ಪರಿಚಯಿಸುವ ಅವರ ಪ್ರಯತ್ನ ಅತ್ಯಂತ ಶ್ಲಾಘನೀಯ. ಭಕ್ತಿ ಸಂಗೀತಕ್ಕೆ ನಂದಿನಿ ಅವರ ಅನನ್ಯ ಕೊಡುಗೆಯನ್ನು ಕರ್ನಾಟಕ ಸರ್ಕಾರವು ಮಾನ್ಯತೆಯನ್ನು ನೀಡಿ, ನಾಡ ಪ್ರತಿಷ್ಠಿತ ಕೆಂಪೇಗೌಡ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಕಳೆದ ಬಾರಿ ಅವರು ಬ್ರಿಟನ್ ಪ್ರವಾಸಕ್ಕೆ ಬಂದಾಗ ಬಿಬಿಸಿ ಏಷ್ಯಾ ನೆಟ್‌ವರ್ಕ್ ರೇಡಿಯೊ ನಿರೂಪಕಿ ಅಶಾಂತಿ ಓಂಕಾರ್ ಅವರು ತಮ್ಮ ಇಂಟರ್ವ್ಯೂ ನಂತರ ‘ನಂದಿನಿ ತನ್ನ ಗಾಯನ ಶೈಲಿಯಲ್ಲಿ ಕರ್ನಾಟಕ ಮತ್ತು ಹಿಂದೂಸ್ತಾನಿ ಸಂಗೀತದ ಮಿಶ್ರಣವನ್ನು ಹೊಂದಿದ್ದಾರೆ’ ಎಂದು ಬಣ್ಣಿಸಿದ್ದಾರೆ.

ತಮ್ಮ ಬಿಡುವಿನ ಸಮಯದಲ್ಲಿ ನಂದಿನಿ ಅವರು ಚಿಕ್ಕ ಮಕ್ಕಳಿಗೆ ಹೆಚ್ಚಿನದಾಗಿ ಒನ್ ಟು ಒನ್ ತರಗತಿಗಳನ್ನು ತೆಗೆದುಕೊಳ್ಳುವುದರ ಮೂಲಕ ಬ್ಯುಸಿ ಆಗಿರುತ್ತಾರೆ. ಈಗ ಕೊರೊನ ಸಾಂಕ್ರಾಮಿಕ ರೋಗದಿಂದಾಗಿ ಆನ್ಲೈನ್ ಕ್ಲಾಸ್ ಗಳಿಗೆ ಬೇಡಿಕೆ ಇರುವುದರಿಂದ ಬಹಳ ಕಡಿಮೆ ವಿದ್ಯಾರ್ಥಿ ಸಮೂದಾಯಕ್ಕೆ ಅವರ ಸಂಗೀತ ಭೋದನೆ ನೀಡುವುದರಲ್ಲಿ ಸಕ್ರೀಯರಾಗಿದ್ದಾರೆ ಆದರೆ ದೊಡ್ಡ ಗುಂಪುಗಳನ್ನೊಳಗೊಂಡ ತರಗತಿಯಲ್ಲಿ ಸಂಗೀತ ಬೋಧನೆ ಮಾಡುತ್ತಿಲ್ಲ. ನಂದಿನಿ ಅವರ ಪ್ರಕಾರ ಸಂಗೀತ ಬೋಧನೆ ಎಂದರೆ ಆಲೋಚನೆಗಳ ವಿನಿಮಯ ಮತ್ತು ಸಂಗೀತವನ್ನು ನಿತ್ಯೋತ್ಸವದಂತೆ ಆಚರಿಸುವುದು. ಅವರ ಪ್ರಕಾರ ಒಬ್ಬ ಯಶಸ್ವೀ ಸಂಗೀತಗಾರನಾಗಲು ದಿನ ಪೂರ್ತಿ ಹಾಡಿ ಅಭ್ಯಾಸ ಮಾಡುವದಕ್ಕಿಂತ ಅನೇಕ ಕಲಾವಿದರನ್ನು ಆಲಿಸಿ, ಪ್ರತಿಯೊಬ್ಬರಿಂದಲೂ ಉತ್ತಮವಾದ ಅಂಶವನ್ನು ಆರಿಸಿ ಮತ್ತು ಇಂತಹ ಪ್ರಕ್ರಿಯೆಯ ಮೂಲಕ ತಮ್ಮದೇ ಆದ ಶೈಲಿಯನ್ನು ಅಭಿವೃದ್ಧಿಪಡಿಸುವುದು ಹಾಗೆಯೇ ಯಾವುದನ್ನೂ ಕುರುಡಾಗಿ ಅನುಕರಿಸಬೇಡಿ ಎಂದು ಸಲಹೆ ನೀಡುತ್ತಾರೆ. 
ಇಂದು ಕೋವಿಡ್ ಮಹಾಮಾರಿಯು ಪ್ರತಿಯೊಬ್ಬರ ನಾಗರಿಕನ ಮೇಲೂ ಮತ್ತು ಪ್ರತಿಯೊಬ್ಬ ಸಂಗೀತಗಾರರ ಜೀವನದ ಮೇಲೆ ಪರಿಣಾಮ ಬೀರಿದೆ. ನಮ್ಮೆಲ್ಲರಿಗೂ ಇದು ಕಠಿಣ ಹಂತ ಎಂದು ನಾವು ಒಪ್ಪಿಕೊಳ್ಳಬೇಕು, ವರ್ಚುವಲ್ ಕಾನ್ಸರ್ಟ್ ಗಳು ಮತ್ತು ತಂತ್ರಜ್ಞಾನಕ್ಕೆ ಧನ್ಯವಾದಗಳು ಹಾಗೂ ಇದರಿಂದಲೇ ನಾವು ಸಂಗೀತ ರಸಿಕರ ತಲುಪಲು ಸಾಧ್ಯವಾಗುತ್ತಿದೆ. ಹೀಗಾಗಿ ನಾವು ಈ ಸಮಯದಲ್ಲಿ ನಮ್ಮ ಭಾವಪೂರ್ಣ ಸಂಗೀತ ಮತ್ತು ಪ್ರಾರ್ಥನೆಗಳಿಂದ ರಾಷ್ಟ್ರವನ್ನು ಗುಣಪಡಿಸುವ ಕಾರ್ಯ ಕೈಗೊಳ್ಳಬಹುದು ಎಂಬುದು ನಂದಿನಿ ಅವರ ಸಕಾರಾತ್ಮಕ ಭರವಸೆ.

Comments

comments