ಪ್ರೀಮಿಯರ್ ಪ್ರಯಾಣ… ಪ್ರೀಮಿಯರ್ ಅನುಭವ

ಸ್ನೇಹಿತರೇ,
ನಮಸ್ಕಾರ! ಸುಮಾರು ಒಂದು ವರ್ಷದ ನಂತರ ನಾನು ಮತ್ತೆ ಈ ಬ್ಲಾಗ್ ಮುಖಾಂತರ ನನ್ನ ಕೆಲವೊಂದು ಅನುಭವವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಮೊದಲನೆಯದಾಗಿ ನಿಮಗೆಲ್ಲ ಹೊಸ ವರ್ಷ ಹಾಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು.
ಕಳೆದ ೨ ವರ್ಷಗಳಿಂದ ನಿಮಗೆ ಗೊತ್ತೇ ಇದೆ, ನಾನು ನಮ್ಮ ಹಲವಾರು ಗೆಳೆಯರರ ಜೊತೆಗೂಡಿ ಇಂಡಿಯಾ ವರ್ಸಸ್ ಇಂಗ್ಲೆಂಡ್ ಚಿತ್ರದದ ಹೊರತು ಕನ್ನಡಿಗರುಯುಕೆ ಇವೆಂಟ್ಸ್ ಹಾಗೂ ಹಲವಾರು ವೈಯುಕ್ತಿಕ ಕಾರ್ಯಗಳಲ್ಲಿ ಮುಳುಗಿದ್ದೆ. ಆದರೆ  ಈಗ ನಮ್ಮ ಚಿತ್ರ ಪ್ರೇಕ್ಷಕರ ಮಧ್ಯ ಇದೆ. ಈಗಾಗಲೇ ಯುನೈಟೆಡ್ ಕಿಂಗ್ಡಮ್ ನಲ್ಲಿ ಎರಡು ಪ್ರೀಮಿಯರ್ ಷೋಸ್ ಹೊರಪಡಿಸಿ ಅಧಿಕೃತವಾಗಿ ಸುಮಾರು ೧೯ ಸಿನೆಮಾಗಳಲ್ಲಿ ಬಿಡುಗಡೆ ಆಗಿದೆ.
ಮನೆ ಕಟ್ಟಿ ನೋಡು, ಸಿನಿಮಾ ಮಾಡಿ ನೋಡು ಎಂದು ನಮ್ಮ ಅನಿವಾಸಿ ಕನ್ನಡಿಗರಾದ ಹಾಗೂ “ಮಹಿರಾ” ಎಂಬ ಚಿತ್ರದ ನಿರ್ಮಾಪಕರಾದ ವಿವೇಕ್ ಕೊಡಪ್ಪ ಅವರು “ಸ್ನೇಹಯಾನ” ಪತ್ರಿಕೆಯಲ್ಲಿ ಬರೆದಿದ್ದು ನಿಜ ಅನ್ನಿಸುತ್ತಿದೆ. ಇಂಗ್ಲೆಂಡ್ ನಲ್ಲಿ  ನಾವು ಮನೆಯನ್ನು ಕಟ್ಟುವದು ಕಷ್ಟ ಸಾಧ್ಯ ಆದರೆ ಹಲವಾರು ಆಂಗ್ಲ ನಾಡಿನಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರು ಸೇರಿ ನಮ್ಮ ಖ್ಯಾತ ನಿರ್ದೇಶಕರಾದ ಡಾ! ನಾಗತಿಹಳ್ಳಿ ಚಂದ್ರಶೇಖರ್ ಜೊತೆಗೂಡಿ ಸಿನಿಮಾ ಕಟ್ಟಬಹುದು ಎಂದು ಹೊರಟೆವು. ಅದೊಂದು ರೋಮಾಂಚಕಾರಿ ಅನುಭವ!

ಸಿನಿಮಾ ಶೂಟಿಂಗ್ ಪ್ರಕ್ರಿಯೆಯ ಅನುಭವ

ಸಿನಿಮಾ ಶೂಟಿಂಗ್ ಲಂಡನ್ ಹಾಗೂ ವೇಲ್ಸ್ ನಲ್ಲಿ ನಡೆದಾಗ ಒಂದು ವೈಭವ ವಾತಾವರಣವಿತ್ತು. ಲಂಡನ್ ಶೂಟಿಂಗ್ ಹೊಣೆಯನ್ನು ನಾನು ವಹಿಸಿಕೊಂಡಿದ್ದೆ. ವೇಲ್ಸ್ ನಲ್ಲಿ  ಸಾಕಷ್ಟು ಕನ್ನಡಿಗ ಗೆಳೆಯರ ಸಹಕಾರವಿತ್ತು. ಹೆಚ್ಚಿನ investors ಅಲ್ಲಿಂದಲೇ ಇರುವದರಿಂದ ಸಹಾಯವಾಯಿತು.
ಲಂಡನ್ ನಲ್ಲಿ ಶೂಟಿಂಗ್ ಮಾಡುವಾಗ ನನ್ನ ಕೆಲವು ಪರಿಚಯವಿರುವ ಕನ್ನಡ ಸ್ನೇಹಿತರು ನೀಡಿದ ಸಹಾಯಕ್ಕೆ ನಾನೆಂದಿಗೂ ಚಿರಋಣಿ. ಕೆಲವರು ವಾರದಿನಗಳಲ್ಲಿ ಶೂಟಿಂಗ್ spot  ಗೆ ಭೇಟಿ ನೋಡಿ ಕರ್ನಾಟಕದಿಂದ ಬಂದ ಕಲಾವಿದರನ್ನು ಭೇಟಿ ಮಾಡಿ, ಶೂಟಿಂಗ್ ಸಮಯದಲ್ಲಿ ಸಹಾಯ ಮಾಡಿದ್ದನ್ನು ಎಂದಿಗೂ ಮರೆಯಲಾರೆ. ಹೀಗೆ ಇನ್ನು ಕೆಲವರು ನನ್ನ ಬಗ್ಗೆ ಕನ್ನಡಿಗರುಯುಕೆ ಸಂಸ್ಥೆಯ ದುರುಪಯೋಗ ಮಾಡಿ ಲಾಭ ಪಡೆಯುತ್ತಿದ್ದೇನೆ ಎಂದು ಆರೋಪ ಮಾಡಿ ಅನಾಮಧೇಯರಾಗಿ ಸಾಮಾಜಿಕ ಜಾಲತಾಣಗಲ್ಲಿ ಹಬ್ಬಿಸಿದ್ದನ್ನು ಕೂಡ ಮರೆಯಲಾರೆ. ಯಾಕೆಂದರೆ ನಾನು ಒಂದೆರಡು ಕಡೆ ಕನ್ನಡಿಗರುಯುಕೆ ಫಲಕವಿರುವ ಟೀ ಶರ್ಟ್ ಹಾಕಿ ಶೂಟಿಂಗ್ ಜಾಗದಲ್ಲಿ ಕಾಣಿಸಿಕೊಂಡಿದ್ದೆ. ಇದರ ಬಗ್ಗೆ ಛೇರ್ಮನ್ ಹಾಗೂ ಕಾರ್ಯಕಾರಿ ಸಮಿತಿಗೆ ಕೂಡ ದೂರು ನೀಡಿದ್ದರು. ಅವರಿಗೆ ನನ್ನ ಮೇಲಿರುವ ಅಭಿಮಾನವೋ ಏನೋ..

೨೦೦೧೯ ರ ಅದ್ಭುತ ಶುರುವಾತು ಹಾಗೂ ಪ್ರೀಮಿಯರ್ ಅನುಭವ

೨೦೧೯ ರಲ್ಲಿ post  production  ಕಾರ್ಯ ಮುಗಿದು ಚಿತ್ರ ಹೊರಬರುವ ಮುನ್ನ ನಾವೆಲ್ಲ ಕಾರ್ಡಿಫ್ ಹಾಗೂ ಲಂಡನ್ ನಲ್ಲಿ ಗ್ರಾಂಡ್ ಪ್ರೀಮಿಯರ್ ಮಾಡೋಣ ಎಂದು ನಿರ್ಧರಿಸಿದೆವು. ಪ್ರೀಮಿಯರ್ ಮಾಡುವ ನಿರ್ಧಾರಕ್ಕೆ ಕಾರಣ ಚಿತ್ರದ ಶೇಕಡಾ ೫೦ ಭಾಗ ಇಂಗ್ಲೆಂಡ್ನಲ್ಲಿ ಚಿತ್ರೀಕರಣ ಆಗಿರುವದರಿಂದ! ಇದು ಒಂದು ಫ್ಯಾಮಿಲಿ ಫಂಡ್ ಮೂವಿ, ಕರ್ನಾಟಕದಲ್ಲಿರುವ ಶಂಕರೇ ಗೌಡ್ರು ಮುಖ್ಯ ನಿರ್ಮಾಪಕರಾದರೂ ಹೆಚ್ಚಿನ ಅನಿವಾಸಿ ಕನ್ನಡಿಗರು ಇಲ್ಲಿ ಇಂಗ್ಲೆಂಡ್ನಲ್ಲೇ ವಾಸವಾಗಿರುವದರಿಂದ ಒಂದು ಗ್ರಾಂಡ್ ಪ್ರೀಮಿಯರ್ ಇಲ್ಲಿರುವ ಕನ್ನಡಿಗರಿಗೆ ಮಾಡೋಣ ಎಂದು ನಾವೆಲ್ಲ ನಿರ್ಧಾರ ಮಾಡಿ ಅದಕ್ಕೆ ಒಂದು ರೂಪು ರೇಷೆ ಕೊಟ್ಟು ಕಾರ್ಯವನ್ನು ಶುರು ಮಾಡಿದ್ವಿ. ನವೆಂಬರ್ ೨ ರಂದು ಕಾರ್ಡಿಫ್ ನಲ್ಲಿ ಹಾಗೂ ನವೆಂಬರ್ ೩ ರಂದು ಲಂಡನ್ ನಲ್ಲಿ ಎಂದು ಘೋಷಿಸಲಾಯಿತು.
ಪ್ರೀಮಿಯರ್ ಮಾಡಲು content  ರೆಡಿ ಆಗುವುದು ಅತ್ಯಗತ್ಯವಾಗಿತ್ತು. ಹೀಗಾಗಿ ನಮ್ಮ ನಿರ್ದೇಶಕರಾದ ಶ್ರೀ ನಾಗತಿಹಳ್ಳಿ ಚಂದ್ರಶೇಖರ್ ಅವರು ಹಾಡಿನ ಸಂಗೀತವನ್ನು ರೆಡಿ ಮಾಡಿ, ಹಿನ್ನೆಲೆ ಸಂಗೀತ ರೆಡಿ ಮಾಡಿಸಿ, ಸಾಕಷ್ಟು ಒದ್ದಾಟ, ಜಗ್ಗಾಟದಲ್ಲಿ ಅಕ್ಟೋಬರ್ ೨೮ ರ ಒಳಗಡೆ ಚಿತ್ರವನ್ನು ಇಲ್ಲಿಯ ಕಾರ್ಡಿಫ್ ಹಾಗೂ ಲಂಡನ್ ಸಫಾರಿ ಸಿನಿಮಾಗಳಿಗೆ ಕಳುಸಿ ಕೊಡಲು ಬ್ಯುಸಿ ಆದರು!
ಸಾಧಾರಣವಾಗಿ ಇಲ್ಲಿ ಪ್ರೀಮಿಯರ್ ಅಥವಾ ಪ್ರೈವೇಟ್ ಶೋ ಮಾಡಲು ಮೊದಲು ಸಿನಿಮಾದವರು ಒಪ್ಪಿದರೆ, ನಿರ್ಮಾಪಕರಿಂದ ಲೈಸನ್ಸ್ ಕೊಟ್ಟರೆ ಸಿನಿಮಾಗಳು BBFC ಸರ್ಟಿಫಿಕೇಟ್ ಬೇಕು ಅಥವಾ ಕೌನ್ಸಿಲ್ ನಿಂದ ಅಪ್ಪಣೆ ಬೇಕು ಎಂದು ಒತ್ತಾಯ ಮಾಡುವದಿಲ್ಲ. ಖಾಸಗಿ ಪ್ರದರ್ಶನ ಅಂದರೆ ಹೊರಗಡೆ ಸಾಮೂಹಿಕವಾಗಿ ಟಿಕೆಟ್ ಮಾರಬಾರದು ಎಂದಿದೆ. ಆದರೆ  ಆ ನಿಯಮ ಅಷ್ಟೊಂದು ಸ್ಪಷ್ಟವಾಗಿಲ್ಲ!
ಕೆಳಗಿನ ಲಿಂಕ್ ನೋಡಿದರೆ ನಿಮ್ಮ ತಲೆ ಕೆಡುತ್ತದೆ ಅಲ್ಲದೇ ಬೇರೆ ಏನೂ ವಿಷಯ BBFC ಬಗ್ಗೆ ಸಿಗುವದಿಲ್ಲ.
ಮೊದಲು content  ಕೈಗೆ ಬರಲಿ ಆಮೇಲೆ BBFC ಮಾಡೋಣ ಅಥವಾ ಕೌನ್ಸಿಲ್ ನಿಂದ ಅನುಮತಿ ಪಡೆಯೋಣ ಎಂದು ಟಿಕೆಟ್ ಲಿಂಕ್ ರೆಡಿ ಮಾಡಿ ವಾಟ್ಸಪ್ಪ್ ಗ್ರೂಪ್ ಗಳಲ್ಲಿ ಹಂಚಿದ್ವಿ.
ಆದರೆ ನಮ್ಮ ಯುಕೆ ಕನ್ನಡಿಗರಲ್ಲೇ ಒಬ್ಬರು  ಅನಾಮದೇಯ ಹೆಸರಿನಲ್ಲಿ ಲಂಡನ್ ಹಾರೋ ಕೌನ್ಸಿಲ್ ಗೆ ದೂರು ನೀಡಿದ್ದೀವಿ ಎಂದು ಸಫಾರಿ ಸಿನಿಮಾ ಥೀಯೇಟರ್ ಗೆ ಇಮೇಲ್ ಮಾಡಿದ್ದಾರೆ ಎಂದು ಗೊತ್ತಾದಾಗ ಮೊದಲು ನಂಬಲಾಗಿಲ್ಲ. ಇಮೇಲ್ ಕಾಪಿ ನನಗೆ ಸಿಕ್ಕಾಗ ಹೌದು ನಮ್ಮಲ್ಲೇ ಒಬ್ಬರು ಯಾರೋ ಅನಿತಾ ಸುರ್ವಿ ಎಂಬ ಹೆಸರಿನಲ್ಲಿ ಕಳಿಸಿದ್ದಾರೆ ಎಂದು ನೋಡಿ ಬೇಜಾರಾಯಿತು.   ಬೇಜಾರಾಗಿದ್ದು ಯಾಕೆಂದರೆ, ನಾನು ಮುಂಚೆಯೇ ವಾಟ್ಸಪ್ಪ್ ಗುಂಪಲ್ಲಿ ಹೇಳಿದ್ದೆ, BBFC ಬಗ್ಗೆ ಏನಾದ್ರೂ ಪ್ರಶ್ನೆ ಇದ್ದರೆ ದಯವಿಟ್ಟು ನನ್ನನ್ನು ನೇರವಾಗಿ ಸಂಪರ್ಕಿಸಿ ಎಂದು. ಅದರಂತೆಯೇ, ಪ್ರೀಮಿಯರ್ flyer  ನಲ್ಲೂ ಕೂಡ contact ಮಾಹಿತಿ ಹಾಗೂ KUK Talkies ಪೇಜ್ ನಲ್ಲೂ ಕೂಡ ಸಾಕಷ್ಟು contact  ಮಾಹಿತಿಗಳಿದ್ದವು.  ಕನ್ನಡಿಗರಲ್ಲಿ, ಕನ್ನಡದ ಗುಂಪುಗಳಲ್ಲಿ ಅಥವಾ ವ್ಯಯುಕ್ತಿಕವಾಗಿ ಭಿನ್ನಪಿಪ್ರಾಯಗಳಿರಬಹುದು ಆದರೆ ಇಲ್ಲಿಯವರೆಗೂ ನಾನು ಯಾರ ಮೇಲೂ ದ್ವೇಷ ಅಸೂಹೆಯಿಂದ ಯಾವುದೇ ರೀತಿಯಲ್ಲಿ ದೂರು ನೀಡುವದು ಅಥವಾ ಸೇಡಿನ ಮನೋಭಾವ ಇಟ್ಟುಕೊಂಡು ಇನ್ನೊಬ್ಬರಿಗೆ ತೊಂದರೆ ಬಯಸಿದ್ದು ಇಲ್ಲವೇ ಇಲ್ಲ, ಆದರೂ ನಮ್ಮ ಪ್ರೀಮಿಯರ್ ಮೇಲೆ ಏಕೆ ಈ ಥರ ದೂರು ನೀಡಿದರು ಎಂದು ಸಾಕಷ್ಟು ಆಗ ಬೇಜಾರಾಯಿತು. ನನ್ನ ಜೊತೆಗಿದ್ದ ಉಳಿದ ಸಿನಿಮಾ investors ಗೂ ಕೂಡ ನಂಬಲಾಗಲಿಲ್ಲ. ಇಮೇಲ್ screenshot  ಇಲ್ಲಿ ಲಗತ್ತಿಸಿದ್ದೇನೆ.


ದೂರು ಮಾಡಿದವರ ಪ್ರಕಾರ, ಆಯೋಜಕರು  ಮಕ್ಕಳ ಟಿಕೆಟ್ ಸರ್ಟಿಫಿಕೇಟ್ ಇಲ್ಲದೇ ಮಾರುತ್ತಿದ್ದಾರೆ ಎಂದು! ಆದರೆ ನಮಗೆ BBFC ಮಾಡಿ ಪ್ರೀಮಿಯರ್ ಟಿಕೆಟ್ ಮಾರಲು ಕಾಲಾವಕಾಶವಿರಲಿಲ್ಲ. ಅದಲ್ಲದೆ ಇದು ಯಾವುದೇ ಅಧಿಕೃತ ಸಿನಿಮಾ ವಿತರಣೆ ಅಲ್ಲವಾದ್ದರಿಂದ ಕೇವಲ ಎರಡೇ ಎರಡು ಪ್ರೈವೇಟ್ ಶೋ ಗೋಸ್ಕರ ಸಿನಿಮಾ ಹಾಲ್ ಖರ್ಚು, ಸೆಲೆಬ್ರಿಟಿ ಪ್ರಯಾಣ, ವಸತಿಯ ಖರ್ಚು ವೆಚ್ಚಕ್ಕೆ ನಾವು ಒಂದು ನಿಗದಿತ ಟಿಕೆಟ್ ಮೊತ್ತವಿಟ್ಟು ಅದನ್ನೂ ನಮ್ಮ ಕನ್ನಡಿಗರ ವಾಟ್ಸಪ್ಪ್ ಹಾಗೂ ಫೇಸ್ಬುಕ್ ಗುಂಪುಗಲ್ಲಿ ಹಂಚಿಕೊಂಡಿದ್ದವೇ ಹೊರತು ಬೇರೆ ಎಲ್ಲೂ ಪ್ರಚಾರ ಮಾಡಿರಲಿಲ್ಲ. ಯಾರದೋ ಹೆಸರಿನಲ್ಲಿ ಇಮೇಲ್ ದೂರುಗಳು, ಸಫಾರಿ ಸಿನಿಮಾಕ್ಕೆ ಪದೇ ಪದೇ ಕರೆ ನೀಡಿ ಇವರು BBFC ಇಲ್ಲದೇ ಪ್ರೀಮಿಯರ್ ಮಾಡ್ತಾ ಇದ್ದಾರೆ ಎಂದು ದೂರು ಕೊಟ್ಟಾಗ, ಸಫಾರಿ ಸಿನಿಮಾ ಸಿಬ್ಬಂದಿಗಳು ನಾವು BBFC ಅಥವಾ ಕೌನ್ಸಿಲ್ ನಿಂದ ಅನುಮತಿ ಇಲ್ಲದೇ ನಿಮ್ಮ ಸಿನಿಮಾ ತೋರಿಸುವದಿಲ್ಲ ಎಂದು ಮಂಗಳವಾರ ೨೯ ನೇ ಅಕ್ಟೋಬರ್ ನಿಂದ BBFC ಸರ್ಟಿಫಿಕೇಟ್ ಬರುವವರೆಗೂ ಸತತವಾಗಿ ಕರೆ ನೀಡಿ ಕಾಡತೊಡಗಿದರು. ೨೯ ನೇ ಅಕ್ಟೋಬರ್ ನಂದೇ ನಮಗೆ ಡಿಸಿಪಿ ಹಾರ್ಡ್ ಡ್ರೈವ್ ಕೈಯಲ್ಲಿ ಸಿಕ್ಕಿತ್ತು ಆದರೆ BBFC ನಮಗೆ ಶುಕ್ರವಾರ ಅಂದರೆ ೧ನೇ ನವೆಂಬರ್ ನಂದು BBFC ಸರ್ಟಿಫಿಕೇಟ್ appointment  ಕೊಟ್ಟಿತು. ಕಾರ್ಡಿಫ್ ನಲ್ಲಿ ೨ ನೇ ನವೆಂಬರ್ ಹಾಗೂ ಲಂಡನ್ ನಲ್ಲಿ ೩ ನೇ ನವೆಂಬರ್ ಪ್ರೀಮಿಯರ್ ಮಾಡುವ ಎಲ್ಲಾ ಸಿದ್ಧತೆ ನಡೆದಿತ್ತು.

ನವೆಂಬರ್ ೧, ರಾಜ್ಯೋತ್ಸವದ ದಿನದಂದು BBFC ಯಿಂದ ದೊಡ್ಡ ಆಘಾತ!

ನಮ್ಮ ಇಂಡಿಯಾ ವರ್ಸಸ್ ಇಂಗ್ಲೆಂಡ್ ಸಿನಿಮಾ ಕುಟುಂಬ ಆಧಾರಿತ ಸಿನಿಮಾ. ಇದರಲ್ಲಿ ಎರಡೇ ಎರಡು ಹೊಡೆದಾಟವಿದೆ. ಈಗಿನ ಸಿನೆಮಾಗಳಲ್ಲಿ ಒಂದೆರಡು ಹೊಡೆದಾಟ, ಗನ್ ಶಾಟ್ ಸಾಮಾನ್ಯ ಆದರೆ ನವೆಂಬರ್ ೧ ರಂದು, BBFC ಸಿನಿಮಾ ನೋಡಿ ನಿಮಗೆ ೧೫ ರೇಟಿಂಗ್ ಕೊಟ್ಟಿದ್ದೀವಿ ಎಂದಾಗ ನನಗಾಗಿದ್ದು ಕೇವಲ ಹೈ ವೋಲ್ಟೇಜ್ ಶಾಕ್! ಪ್ರೀಮಿಯರ್ ನಲ್ಲಿ ಮಕ್ಕಳಿಗಾಗಿ ವಿಶೇಷ ಸ್ವಾಗತದ ತಯ್ಯಾರಿ ಇತ್ತು, ಅದಲ್ಲದೆ ಕನ್ನಡ ಕಲಿ ಹಾಡು ಕೂಡ ಮಕ್ಕಳಿಗಾಗಿಯೇ ಇತ್ತು! ೧೫ ರೇಟಿಂಗ್ ಎಂದರೆ ೧೫ ವರ್ಷಕ್ಕಿಂತ ಕೆಳಪಟ್ಟ ಮಕ್ಕಳು ಪ್ರೀಮಿಯರ್ ಗೆ ಬರುವ ಹಾಗೆ ಇಲ್ಲ. ನೀವು ರೇಟಿಂಗ್ ಒಪ್ಪದಿದ್ದರೆ ಸೋಮವಾರವೇ ಇದನ್ನು ಕೆಲವು ಕಟ್ ಮಾಡಿಕೊಟ್ಟರೆ ಪರಿಶೀಲಿಸಲಾಗುವದು ಎಂದು BBFC ತಿಳಿಸಿದ್ದು. ಶನಿವಾರ ಹಾಗೂ ಭಾನುವಾರ ನಮ್ಮ ಪ್ರೀಮಿಯರ್ ಇರುವದರಿಂದ ಇದು ಅಸಾಧ್ಯವಾಗಿತ್ತು. ಸುಮಲತಾ ಅವರು ಆಗಲೇ ೨ ನೇ ನವೆಂಬರ್ ಕಾರ್ಡಿಫ್ ಗೆ ಬರುವವರಿದ್ದರು. ನಾಗತಿಹಳ್ಳಿ ಸರ್ ಹಾಗೂ ಮಾನ್ವಿತಾ ಆಗಲೇ ಬಂದಿದ್ದರು. ಕಾರ್ಡಿಫ್ ಆಗಲೇ ಹೌಸೆಫುಲ್ ಬುಕಿಂಗ್ ಇತ್ತು. ಲಂಡನ್ ಗೆ ಕೂಡ ಸಾಕಷ್ಟು ಜನ ಟಿಕೆಟ್ ಖರೀದಿಸಿದ್ದರು. ಆಗ ಸಫಾರಿ ಸಿನಿಮಾ ನಮಗೆ ಹೇಳಿದ್ದೇನೆಂದರೆ BBFC ಇಲ್ಲದೇ ನಾವು ಸಿನಿಮಾ ತೋರಿಸಲಾಗುವದಿಲ್ಲ ಯಾಕೆಂದರೆ ಆಗಲೇ ಕೌನ್ಸಿಲ್ ನಲ್ಲಿ ದೂರು ಹೋಗಿದೆ. ಕೌನ್ಸಿಲ್ ಕಂಪ್ಲೇಂಟ್ ಹೋದಾಗ ನಾನು ಆಗಲೇ ಎರಡು ದಿನ ರಜಾ ಹಾಕಿ ಈ ಕೆಲಸದಲ್ಲೇ ತೊಡಗಿದ್ದೆ. ಸಾಕಷ್ಟು ಬೇಸತ್ತು BBFC ಗೆ ಕರೆ ಮಾಡಿ ಈವಾಗ ೧೫ ಸರ್ಟಿಫಿಕೇಟ್ ಬಂದಿದೆ ಆದರೆ ನಾನು ಇದನ್ನು ಒಪ್ಪಿಕೊಂಡು ವಾರದಂತ್ಯದ ಪ್ರೀಮಿಯರ್ ಮಾಡಿ ಸೋಮವಾರ ಮತ್ತೆ ಕಟ್ ಮಾಡಿದ version  ಒಪ್ಪಿಸಬಹುದಾ ಎಂದು ಕೇಳಿದೆ. ಅವರು ಹೇಳಿದ್ದು ಇಲ್ಲ ನೀವು ಒಂದು ಸಲ ಒಪ್ಪಿಕೊಂಡರೆ ಮತ್ತೆ ಎಲ್ಲಾ ಪುನಃ ಮನವಿ ಸಲ್ಲಿಸಿ ಒಪ್ಪಿಸಬೇಕಾಗುತ್ತದೆ, ಫುಲ್ ಫೀಸ್ ಕೂಡ ಕೊಟ್ಟು 12A ಸರ್ಟಿಫಿಕೇಟ್ ಆಮೇಲೆ ಮತ್ತೆ ಸಿನಿಮಾ ನೋಡಿ ಕೊಡುತ್ತೇವೆ ಅಂದರು. ನಾನು ಹೇಗಾದರೂ ಮಾಡಿ ಸಾಯಂಕಾಲ ೫.೩೦ ರ ವರೆಗೆ ಕಾಯಿರಿ, ಫೋನ್ ಮಾಡಿ ಹೇಳುತ್ತೇನೆ,  ೧ ಘಂಟೆ ಸಮಯಾವಕಾಶ ಕೊಡಿ ಎಂದು ಹಾರೋ ಕೌನ್ಸಿಲ್ ಕಡೆ ಡ್ರೈವ್ ಮಾಡಿ ಹೋದೆ.
ಹೇಗಾದರೂ ಮಾಡಿ ಕೌನ್ಸಿಲ್ ಹತ್ತಿರ ವಿವರವಾಗಿ ತಿಳಿಸಿ ತಾತ್ಕಾಲಿಕ ಸರ್ಟಿಫಿಕೇಟ್ ತಕೊಳೋಣ ಎಂದು ಹಾರೋ ಕೌನ್ಸಿಲ್ ಆಫೀಸ್ ಹೋದರೆ ಸರ್ಟಿಫಿಕೇಷನ್ ಖಾತೆಯವರೆಲ್ಲ ೪ ಘಂಟೆಗೇ ಆಫೀಸ್ ಮುಚ್ಚಿ ಹೋಗಿದ್ದಾರೆ. ಕೌನ್ಸಿಲ್ ಕಚೇರಿಯ ಸ್ವಾಗತಕಾರಿ ಮಹಿಳೆಗೆ ಆಫೀಸರ್ ಕಾಂಟಾಕ್ಟ್ ವಿವರ ಕೊಡಿ ಎಂದು ಕಾಡಿ, ಬೇಡಿ ಸಾಕಷ್ಟು ಪ್ರಯತ್ನ ಪಟ್ಟರೂ ವಿಫಲವಾಯಿತು.
ಬೇರೆ ವಿಧಿಯಿಲ್ಲದೇ, BBFC ಗೆ ೫.೩೦ ಗೆ ಕರೆ ಮಾಡಿ ಸರಿ ೧೫ ರೇಟಿಂಗ್ ಗೆ ಒಪ್ಪಿಗೆ ಇದೆ ಯಾಕೆಂದರೆ ನಮಗೆ ಹೇಗಾದರೂ ಪ್ರೀಮಿಯರ್ ಮಾಡಲೇಬೇಕು ಈ ಶನಿವಾರ ಹಾಗೂ ಭಾನುವಾರದಂದು ಮತ್ತೆ ಪ್ರೀಮಿಯರ್ ಆದಮೇಲೆ ಕಟ್ ಮಾಡಿದ ಡಿಸಿಪಿ ಡ್ರೈವ್ ಒಪ್ಪಿಸಿ ಇನ್ನೊಮ್ಮೆ 12A ಸರ್ಟಿಫಿಕೇಟ್ ತಕೊಳ್ತೀವಿ ಎಂದೆ!

ಕಾರ್ಡಿಫ್ ಪ್ರೀಮಿಯರ್ ಹಾಗೂ ಲಂಡನ್ ಪ್ರೀಮಿಯರ್ ಟಿಕೆಟ್ ರದ್ದತಿ

ಮಕ್ಕಳ ಟಿಕೆಟ್ ಪಡೆದವರಿಗೆ ಅತಿ ಕಡಿಮೆ ಸಮಯದಲ್ಲಿ ಇಮೇಲ್ ಹಾಗೂ ಮೊಬೈಲ್ ಕರೆಗಳನ್ನು ಮಾಡಿ ಮೂವಿ BBFC ಯಿಂದ ೧೫ ರೇಟಿಂಗ್ ಬಂದಿದೆ, ದಯವಿಟ್ಟು ನಿಮ್ಮ ಮಕ್ಕಳನ್ನು ಹೊರಗಡೆ ಬಿಟ್ಟು ಸಿನಿಮಾ ನೋಡಬೇಕಾಗುತ್ತದೆ ಆದರೆ ನಾವೆಲ್ಲ ಸ್ವಯಂ ಸೇವಕರು ಪಕ್ಕದ ಸ್ಕ್ರೀನ್ ನಲ್ಲಿ ಮಕ್ಕಳ ಸಿನಿಮಾ ತೋರಿಸುತ್ತೇವೆ, ಇದು ನಿಮಗೆ ಒಪ್ಪಿಗೆಯಿಲ್ಲ ಅಂದರೆ, ನಿಮ್ಮ ಟಿಕೆಟ್ ರದ್ದು ಮಾಡಿ ಸಂಪೂರ್ಣ ಹಣ ವಾಪಾಸ್ ಕೊಡಲಾಗುವದು ಎಂದು ಹೇಳಿದಾಗ, ಕೆಲವರು ಟಿಕೆಟ್ ರದ್ದು ಮಾಡಿದರು.
ಲಂಡನ್ ನಲ್ಲೂ ಕೂಡ ಸಫಾರಿ ಸಿನಿಮಾದ ಚಿಕ್ಕ ಥೀಯೇಟರ್ ಬುಕ್ ಮಾಡಿ ಅಲ್ಲಿ ಮಕ್ಕಳ ಸಿನಿಮಾ ವ್ಯವಸ್ಥೆ ಮಾಡಿದ್ದೆವು. ಇನ್ನು ಲಂಡನ್ ಪ್ರೀಮಿಯರ್ ಕೂಡ ದುರಾದ್ರಷ್ಟಕ್ಕೆ ಕ್ಯಾನ್ಸಲ್ ಆಯಿತು. ತಾಂತ್ರಿಕ ಕಾರಣದಿಂದ! ಬಂದವರೆಲ್ಲಾ ನನ್ನ ಮೇಲೆ ಸಹಾನುಭೂತಿ ತೋರಿಸಿ, ಸಾಕಷ್ಟು ತಾಳ್ಮೆಯಿಂದ ಬೇಜಾರು ಮಾಡಿಕೊಳ್ಳದೇ ಹೋದಾಗ ಆದ ನೋವು ಕೌನ್ಸಿಲ್ ಕಂಪ್ಲೇಂಟ್ ಮಾಡಿದಾಗ ಆದ ನೋವಿಗಿಂತ ಬೇರೆಯೇ ಆಗಿತ್ತು.
ಅದಾದ ಮೇಲೆ ವಿಶೇಷ ಪ್ರದರ್ಶನವನ್ನು ಡಿಸೆಂಬರ್ ೧೫ ರಂದು 12A  ರೇಟಿಂಗ್ BBFC ಯಿಂದ ಪಡೆದು ಯಶಸ್ವಿಯಾಗಿ ಸಫಾರಿ ಸಿನಿಮಾದಲ್ಲೇ ಪ್ರದರ್ಶಿಸಿ, ಡಿಸೆಂಬರ್ ೧೯ ರಂದು ಕ್ರಿಸ್ಮಸ್ ಪ್ರಯುಕ್ತ ಸ್ಪೇನ್ ಕಡೆ ರಜಾ ಕಳೆಯಲು ಹೋದೆ…
ಕೆಲವರು ಟಿಕೆಟ್ ಕ್ಯಾನ್ಸಲ್ ಮಾಡಿ REFUND ತೆಗೆದುಕೊಂಡರೂ, ಸಾಕಷ್ಟು ಜನ ಕುತೂಹಲದಿಂದ ನಮ್ಮ ಪ್ರೀಮಿಯರ್ ಲಂಡನ್ ನಲ್ಲಿ ಬಂದು ನೋಡಿದ್ದು ತೃಪ್ತಿ ನೀಡಿತು.
ಈ ಅನುಭವ ಅತ್ಯಮೂಲ್ಯವಾದದ್ದು. ಹೌದು ಅಡಚಣೆಗಳಿದ್ದವು ಆದರೆ ನಿಮ್ಮೊಂದಿಗೆ ಈ ಬ್ಲಾಗ್ ಮುಖಾಂತರ ಇದೆಲ್ಲ ವಿವರಿಸಿ ಬರೆಯಲು ಮುಖ್ಯ ಕಾರಣ ಮುಂಬರುವ ಇಂತಹ ಪ್ರೀಮಿಯರ್ ಕಾರ್ಯಕ್ರಮಗಳಿಗೆ ಅನುಕೂಲವಾಗಲಿ ಎಂದು. ನನಗೆ ಪ್ರತ್ಯಕ್ಷ ಅನುಭವವಿರುವದರಿಂದ, ಮುಂದೆ ಯಾವ ಯುಕೆ ಕನ್ನಡಿಗನಿಗೆ ಅಥವಾ ಗುಂಪುಗಳಿಗೆ ಇಲ್ಲಿ ಪ್ರೀಮಿಯರ್ ಮಾಡುವ ಅಥವಾ ಇಂಥವ ಶೂಟಿಂಗ್ ಮಾಡುವ ಅವಕಾಶ ಬಂದರೆ, ನನ್ನ ಸಹಾಯ ಸದಾ ಇರುತ್ತದೆ.

ಹೀಗಿತ್ತು ನನ್ನ ಪ್ರೀಮಿಯರ್ ಪ್ರಯಾಣ… ಪ್ರೀಮಿಯರ್ ಅನುಭವ !

ರಂಗೇರಿಧೆ ಮಾಯಾಜಾಲ
ಅನುಭವಿಸು ಓ ಪ್ರೇಕ್ಷಕನೇ
ಧೃಷ್ಟಿ ನನ್ನೊಬ್ಬನ ಮೇಲಿಡಿ
ತಪ್ಪದ್ದು ನಿಜ ಮನರಂಜನೆ

Wish You All Happy Time… will continue this blog soon!

Comments

comments