ದೀಪಾವಳಿಯ ಶುಭಾಶಯಗಳೊಂದಿಗೆ ಯುಕೆ ಕನ್ನಡಿಗರ ರಾಜ್ಯೋತ್ಸವ ಸಂಭ್ರಮ

ನಮಸ್ಕಾರ ಎಲ್ಲರಿಗೂ. ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು. ಮೊನ್ನೆ ಭಾನುವಾರ ತಾನೇ ಅದ್ದೂರಿಯಾಗಿ ಕನ್ನಡಿಗರುಯುಕೆ ವತಿಯಿಂದ ಕನ್ನಡ ರಾಜ್ಯೋತ್ಸವದ ಆಚರಣೆ ಆಯಿತು. ರಾಜ್ಯೋತ್ಸವ  ನಾವೆಲ್ಲಾ ಕನ್ನಡಿಗರಿಗೆ ಒಂದು ವಿಶೇಷ ಸಂಭ್ರಮ. ಕರ್ನಾಟಕಕ್ಕಿಂತ ಹೆಚ್ಚಾಗಿ, ಅನಿವಾಸಿ ಕನ್ನಡಿಗರಿಗೆ ಇಂದೊಂದು ಹೆಮ್ಮೆಯ ಹಬ್ಬ. ನಮ್ಮ ತಾಯ್ನಾಡನ್ನು ಬಿಟ್ಟು ದೂರದ ಇಂಗ್ಲೆಂಡ್ ದೇಶಕ್ಕೆ ಬಂದು ನೆಲೆಸಿದ ನಮಗೆ ಪ್ರತೀ ವರ್ಷ ಕನ್ನಡಾಂಬೆಯ ಸ್ಮರಿಸಿ ಜೊತೆಗೂಡುವ ಒಂದು ಅವಕಾಶ ಸಿಗುತ್ತಿತ್ತು ಆದರೆ ಈ ಬಾರಿ ಕರೋನ ಮಹಾಮಾರಿಯ ಶಾಪದಿಂದ ಒಂದೆಡೆ ಸೇರುವ ಅವಕಾಶ ಸಿಗದಿದ್ದರೂ ವರ್ಚುಯಲ್ ಆಗಿ ಜೂಮ್ ಮುಖಾಂತರ ಕನ್ನಡ ರಾಜ್ಯೋತ್ಸವವನ್ನು ಆಚರಿಸಿರುವುದು ಅತ್ಯಂತ ವಿಶೇಷ. ಸಾಮಾನ್ಯವಾಗಿ ಅಂತರ್ಜಾಲದ ಮೂಲಕ ಒಂದು ಕಾರ್ಯಕ್ರಮವನ್ನು ಅಚ್ಚು ಕಟ್ಟಾಗಿ ನೆರವೇರಿಸುವುದು ಸುಲಭವಾದ ಮಾತಲ್ಲ. ಇತ್ತೀಚಿಗೆ ಸುಮಾರು ಆನ್ಲೈನ್ ಕಾರ್ಯಕ್ರಮಗಳು ನಡೆದಿವೆ ಆದರೆ ಬಹುತೇಕ ಅವೆಲ್ಲಾ ಮುಂಚಿತವಾಗಿ ರೆಕಾರ್ಡ್ ಮಾಡಿ ಬಿತ್ತರಿಸಿರುವ ಕಾರ್ಯಕ್ರಮಗಳು. ವಿಶೇಷವಾಗಿ ಈ ಬಾರಿ ಕನ್ನಡಿಗರುಯುಕೆ ತಂಡ ಎಲ್ಲಾ ಕಾರ್ಯಕ್ರಮಗಳನ್ನು ಲೈವ್ ಆಗಿ ಮಾಡಿರುವುದು ಸಾಹಸವೇ ಸರಿ.

ನವೆಂಬರ್ ೮ ರಂದು KUK ಗಾಟ್ ಟ್ಯಾಲೆಂಟ್ ಎಂಬ ವರ್ಚುಯಲ್ ರಿಯಾಲಿಟಿ ಸ್ಪರ್ಧೆಯ ಮೂಲಕ ೫೦ ಕ್ಕೂ ಹೆಚ್ಚು ಪ್ರತಿಸ್ಪರ್ದಿಗಳು, ೧೮ ತೀರ್ಪುಗಾರರು, ೬ ನಿರೂಪಕ ನಿರೂಪಕಿಯರು, ಭಾರತದ ಉಪ ರಾಯಭಾರಿ, ಬ್ರಿಟಿಷ್ ಉಪ ರಾಯಭಾರಿ, ಕರ್ನಾಟಕದ ಉಪಮುಖ್ಯಮಂತ್ರಿಗಳು, ಕನ್ನಡ ಸಾಂಸ್ಕೃತಿಕ ಹಾಗೂ ಪ್ರವಾಸೋದ್ಯಮ ಸಚಿವರು, ಕನ್ನಡ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಕನ್ನಡ ಪ್ರಾಧಿಕಾರದ ಸಹನಿರ್ದೇಶಕರು ಹೀಗೆ ಹಲವಾರು ಗಣ್ಯ ವ್ಯಕ್ತಿಗಳೊಂದಿಗೆ ಅಚ್ಚು ಕಟ್ಟಾಗಿ ಸೊಗಸಾಗಿ ಕಾರ್ಯಕ್ರಮವನ್ನು ನಡೆಸಿಕೊಟ್ಟ ಶ್ರೇಯಸ್ಸು ಕನ್ನಡಿಗರುಯುಕೆ ಸಂಸ್ಥೆಗೆ ಸಲ್ಲುತ್ತದೆ.

ನಮ್ಮ ಯುಕೆ ಕನ್ನಡಿಗರ ಪ್ರತಿಭೆಯನ್ನು ಕನ್ನಡಿಗರುಯುಕೆ ಪ್ರತಿ ವರ್ಷವೂ ವೇದಿಕೆಯ ಮೂಲಕ ಅವಕಾಶ ಕೊಟ್ಟು ಬೆಳೆಸಿಕೊಂಡು ಬರುತ್ತಾ ಇದೆ ಆದರೆ ಈ ಬಾರಿ ಒಂದು ಪ್ರತಿಭಾನ್ವೇಷಣೆಯ ದ್ಯೇಯವನ್ನಿಟ್ಟುಕೊಂಡು ಯಾಕೆ ನಾವು ರಾಜ್ಯೋತ್ಸವದ ಆಚರಣೆ ಮಾಡಬಾರದುಎಂದು ಸಮಿತಿ ಯಲ್ಲಿ ಪ್ರಸ್ತಾಪನೆ ಬಂದಾಗ ಕಮಿಟಿಯ ಎಲ್ಲಾ ಸದಸ್ಯರಿಂದ ಒಪ್ಪಿಗೆ ಬಂದಿದ್ದು ಸೆಪ್ಟೆಂಬರ್ ತಿಂಗಳಲ್ಲಿ. ಅದರೊಂದಿಗೆ ಕನ್ನಡ ಕಲಿ ಮಕ್ಕಳಿಗೆ ವಿಶೇಷವಾಗಿ ಕನ್ನಡ ಮಾತನಾಡುವ ಸ್ಪರ್ಧೆ ಕೂಡ ಈ ಕಾರ್ಯಕ್ರಮದಲ್ಲಿ ಅಳವೊಡಿಸಿಕೊಂಡಿದ್ದು ವಿಶೇಷವಾಗಿತ್ತು.

ಈ ಕಾರ್ಯಕ್ರಮದಿಂದ ಹಲವಾರು ಪಾಸಿಟಿವ್ ಅಂಶಗಳು ಹೊರಬಂದವು

೧) ಭಾರತದ ಉಪ ರಾಯಭಾರಿ ಚರಣಜೀತ್ ಸಿಂಗ್ ಅವರು ಮಾತನಾಡಿ ಲಾಕಡೌನ್  ಸಮಯದಲ್ಲಿ ಕಷ್ಟಕ್ಕೆ ಸಿಲುಕಿದ ಹಲವಾರು ಭಾರತೀಯರಿಗೆ ಹಾಗೂ ಕನ್ನಡಿಗರಿಗೆ ಸಹಾಯ‌ಮಾಡಲು ಭಾರತೀಯ ಹೈಕಮೀಷನ್  ನೊಂದಿಗೆ, ಸಂಸ್ಥೆ ಸಹಕರಿಸಿದ್ದನ್ನು ಅವರು ಸ್ಮರಿಸಿದರು. ಭಾರತೀಯ ಹೈ ಕಮೀಷನ ಈ ಕಷ್ಟಕಾಲದಲ್ಲಿ ಕೈಗೊಂಡಿರುವ ಕೆಲಸಗಳನ್ನು ಮತ್ತು ಒದಗಿಸುತ್ತಿರುವ ಸೇವೆಗಳನ್ನು ಅನಿವಾಸಿಕನ್ನಡಿಗರು ತಿಳಿದುಕೊಳ್ಳುವ ಅವಕಾಶ ದೊರಕಿತು.

೨)ಮುಖ್ಯ ಅಥಿತಿಗಳಾಗಿ ಶ್ರೀ ಜರೆಮಿ  ಪಿಲ್ಮೋರ್ ಬೆಡ್ಫೋರ್ಡ್ ಅವರು ಬಂದಿದ್ದು ಇನ್ನೊಂದು ವಿಶೇಷವಾಗಿತ್ತು. ೧೫ ಲಕ್ಷಕ್ಕೂ  ಮಿಗಿಲಾದ ಭಾರತೀಯ ವಲಸಿಗರು ಯುಕೆಯಾದ್ಯಂತ  ನೆಲೆಸಿ  ಹಲವಾರು ಕ್ಷೇತ್ರಗಳಲ್ಲಿ, ಅದರಲ್ಲೂ ವಿಶೇಷವಾಗಿ ರಾಷ್ಟ್ರೀಯ ಆರೋಗ್ಯ ಸೇವಾವಿಭಾಗದಲ್ಲಿ ತಮ್ಮ ಕೊಡುಗೆಯನ್ನು ನೀಡುವುದರ ಮೂಲಕ ಎರಡು ದೇಶಗಳ ಮಧ್ಯೆ ಬಲವಾದ ಸೇತುವೆಯಾಗಿ ನಿಂತು, ಇವರ ಜೊತೆ  ಕನ್ನಡಿಗರುಯುಕೆಯಂತಹ ಸಂಸ್ಥೆಗಳು ಕೂಡ ಇಂತಹ ಸೇವೆ ಸಲ್ಲಿಸುತ್ತಿವೆ ಎಂದು ಪ್ರಶಂಸಿಸಿ ಮುಂದೆ ಬ್ರೆಕ್ಸಿಟ್ ನಂತರ ಇರುವ ಅವಕಾಶಗಳ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದು ಉತ್ತೇಜನಪೂರ್ಣವಾಗಿತ್ತು.

೩)ಉಪ ಮುಖ್ಯಮಂತ್ರಿಗಳಾದ ಶ್ರೀ ಡಾ| ಅಶ್ವತ್ ನಾರಾಯಣ ಅವರು ಮಾತನಾಡಿ ಕನ್ನಡ ಎಲ್ಲೆಡೆ ಬೆಳೆಯಲು ಬೆಳಸಲು ತಾಂತ್ರಿಕತೆಯ ಉಪಯೋಗ ಮುಖ್ಯ ಹಾಗೆಯೇ ಏನ್. ಆರ್. ಐ ಅಧ್ಯಕ್ಷರನ್ನು ನಿಯೋಕ್ತಿ ಮಾಡಲು ಸರಕಾರವನ್ನು ಕೇಳಿಕೊಳ್ಳುತ್ತೇನೆ ಎಂದು ತಿಳಿಸಿದ್ದು ಈ ಸಂದರ್ಭದಲ್ಲಿ ಸೂಕ್ತವಾಗಿತ್ತು.

೪)ಮಾಜಿ ಕನ್ನಡ ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಸಚಿವರಾದ ಶ್ರೀ ಸಿ.ಟಿ.ರವಿಯವರು ತಮ್ಮ ಅನಿಸಿಕೆಗಳನ್ನು ದೃಶ್ಯಾವಳಿ  ಸಂದೇಶದ ಮೂಲಕ ಹಂಚಿಕೊಂಡು, ಕನ್ನಡಿಗರುಯುಕೆ ಮುಂದಿನ ಪೀಳಿಗೆಗೆ ಕನ್ನಡದ ಸಂಸ್ಕೃತಿಯನ್ನು ವರ್ಗಾಯಿಸಲು  ಹಮ್ಮಿಕೊಂಡಿರುವ ಯೋಜನೆಗಳ ಬಗ್ಗೆ ಎಷ್ಟೆ ಶ್ಲಾಘಿಸಿದರು ಉತ್ಪ್ರೇಕ್ಷೆಯೇನಲ್ಲಾ ಎಂದು ಸಂತಸ ವ್ಯಕ್ತಪಡಿಸಿದ್ದು ಸ್ಪೂರ್ತಿದಾಯಕವಾಗಿತ್ತು.

೫) ಕನ್ನಡ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ನಾಗಾಭರಣ ಅವರು ಮಾತನಾಡಿ ಕನ್ನಡ ಕಾಯಕ ವರ್ಷ ಕಾರ್ಯಕ್ರಮದಲ್ಲಿ ಭಾಗವಹಿಸಲು ಎಲ್ಲರನ್ನು ಆವ್ಹಾನಿಸಿದ್ದು ಹಾಗೆಯೇ ಕಾರ್ಯದರ್ಶಿಗಳಾದ ಡಾ| ಮುರಳೀಧರ್ ಅವರು ಆನ್ಲೈನ್ ಕನ್ನಡ ಕಲಿ ತರಗತಿಗಳನ್ನು ಕನ್ನಡಿಗರುಯುಕೆ ಹಮ್ಮಿಕೊಂಡಿದ್ದು ಉತ್ತಮವಾದ ಹೆಜ್ಜೆ ಎಂದು ಹೇಳಿ ಈ ಕೋವಿಡ್ ಪರಿಸ್ಥಿತಿಯಲ್ಲಿ ತಂಡ ಪರಿಣಾಮಕಾರಿಯಾಗಿ ಕೆಲಸವನ್ನು ನಿರ್ವಹಿಸುತ್ತಿದೆ ಎಂದು ಶ್ಲಾಘಿಸಿದಾಗ ಆಯೋಜಕರಲ್ಲಿ ಇನ್ನಷ್ಟು ಹುಮ್ಮಸ್ಸು ಬಂದಿರುವ ಬಗ್ಗೆ ಸಂದೇಹವೇ ಇಲ್ಲ.

೬) ಸುಮಾರು ೨೫ ಯುಕೆ ಕನ್ನಡ ಮಕ್ಕಳು ಕನ್ನಡ ಕಲಿ ಸ್ಪರ್ಧೆಯಲ್ಲಿ ಭಾಗವಹಿಸಿ ಕನ್ನಡ ಭಾಷೆಯಲ್ಲಿ ಮಾತನಾಡಿ ತೀರ್ಪುಗಾರರಿಂದ ಭೇಷ್ಎನ್ನಿಸಿಕೊಂಡಿದ್ದು ತೃಪ್ತಿ ತಂದಿದೆ ಎನ್ನುವದರಲ್ಲಿ ಸಂದೇಹವೇ ಇಲ್ಲ.

೭) ಮಕ್ಕಳ ಪ್ರತಿಭೆಗಳನ್ನು ನೋಡಿ ಶಭಾಷ್ ಎಂದ ಎಲ್ಲಾ ತೀರ್ಪುಗಾರರು ಯಾರನ್ನು ವಿನ್ನರ್ ಎಂದು ಘೋಷಿಸೋಣ ಎಂದು ಸಂಧಿಗ್ದ ಪರಿಸ್ಥಿತಿಯಲ್ಲಿ ಸಿಲುಕಿ ಕೊನೆಯಲ್ಲಿ ಎಲ್ಲರಿಗೂ ಸ್ಪೂರ್ತಿದಾಯಕವಾದ ಹಿತನುಡಿಗಳನ್ನು ಹೇಳಿದ್ದು ಆಯೋಜಕರೂ ಹಾಗೂ ನೆರೆದ ಪೋಷಕರಿಗೆ ಖುಷಿ ತಂದಿತು.

ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು ಎಂಬ ಅಣ್ಣಾವ್ರ ಹಾಡು ಈಗಲೂ ಪ್ರಚಲಿತ, ಆದರೆ ಹೊರ ನಾಡಲ್ಲಿ ಹುಟ್ಟಿರುವ ಕನ್ನಡ ಮಕ್ಕಳು ಕನ್ನಡನಾಡಲ್ಲಿ ಹುಟ್ಟಿಲ್ಲವಾದರೂ, ಹೇಗೆ ಕನ್ನಡವನ್ನು ಆಲಂಗಿಸಿ ಆಚರಿಸಬಹುದು ಎಂಬುದನ್ನು ಈ ಕಾರ್ಯಕ್ರಮ ತೋರಿಸಿಕೊಟ್ಟಿದೆಎಂಬುದಲ್ಲಿ ಸಂದೇಹವೇ ಇಲ್ಲ.

ಹೀಗೆಯೇ ಕನ್ನಡಿಗರುಯುಕೆ ಕನ್ನಡ ಕಾರ್ಯವನ್ನು ಮುಂದುವರೆಸಿಕೊಂಡು ಹೋಗಲಿ,ಇದೆ ರೀತಿ ಒಳ್ಳೆಯ ಕಾರ್ಯಕ್ರಮಗಳಿಂದ ಕನ್ನಡವನ್ನು ಯುಕೆಯ ಮನೆ ಮನೆಗಳಿಗೆ ಕನ್ನಡದ ಕಂಪನ್ನು ಪಸರಿಸಲಿ ಎಂದು ಹಾರೈಸುತ್ತಾ ಮತ್ತೊಮ್ಮೆ ಎಲ್ಲರಿಗೂ ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯವನ್ನು ಕೋರುತ್ತೇನೆ.

Comments

comments