ಸಾಗರೋತ್ತರ ಕನ್ನಡಿಗರ ಬಗ್ಗೆ

ಕೋವಿಡ್ ಸಮಯದಲ್ಲಿ ಹಲವಾರು online ಇವೆಂಟ್ ಮ್ಯಾನೇಜ್ಮೆಂಟ್ ಗುಂಪುಗಳು, ಚಾನೆಲ್ಸ್ ಗಳು ಹುಟ್ಟಿಕೊಂಡಿವೆ. ಹಲವಾರು ಕಾರ್ಯಕ್ರಮಗಳನ್ನು ಜೂಮ್ ಮೂಲಕ ನಡೆಸಲಾಗುತ್ತಿದೆ. ಇವೆಲ್ಲಾ ಆಗುತ್ತಿರುವುದು ಒಳ್ಳೆಯದೇ.

ಇತ್ತೀಚಿಗೆ ಜಾಲತಾಣಗಳಲ್ಲಿ ಪ್ರಚಲಿತವಿರುವ ಸಾಗರೋತ್ತರ ಕನ್ನಡಿಗರು ಎಂಬ ಗುಂಪು ತಾವು ೫೫ ದೇಶದ ಸಾಗರೋತ್ತರ ಕನ್ನಡಿಗರನ್ನು ಪ್ರತಿನಿಧಿಸುತ್ತಿದ್ದೇವೆ ಎಂದು ಜೂಮ್ ಕಾರ್ಯಕ್ರಮದ ಮೂಲಕ ಗಣ್ಯ ವ್ಯಕ್ತಿಗಳನ್ನು, ರಾಜಕಾರಿಣಿಗಳನ್ನು, ಸ್ವಾಮೀಜಿಗಳನ್ನು ವೇದಿಕೆಗೆ ತಂದು ಗೌರವಿಸಿತ್ತಿರುವುದು ಒಳ್ಳೆಯ ವಿಷಯವಾದರೂ, ೨೫ ಜೂಮ್ ಕಾರ್ಯಕ್ರಮ ಮಾಡಿ ನಾವು ೨೫ ನೇ ಬೆಳ್ಳಿ ಹಬ್ಬ ಆಚರಿಸುತ್ತಿದ್ದೇವೆ ಎಂದು ಸುಳ್ಳು ಪ್ರತಿಪಾದಿಸುವುದು ಘೋರ ತಪ್ಪು. ಮೊದಲನೆಯದಾಗಿ ಇವರಿಗೆ ಬೆಳ್ಳಿ ಹಬ್ಬ ಪದದ ಮಹತ್ವ ಗೊತ್ತಿಲ್ಲವೇ ?
ಮುಖ್ಯ ಮತ್ರಿಗಳಿಂದ ರಜತ ಮಹೋತ್ಸವ ಎಂದು ಸಂದೇಶ ಪತ್ರ ಪಡೆಯುವುದು, ಎಲ್ಲಾ ಮಾಧ್ಯಮಗಳಲ್ಲಿ ಅದನ್ನು ಹಂಚುವುದು.. ಹೀಗೆ ಪ್ರತೀ ಇವೆಂಟ್ ನಂತರ ವಿದೇಶಗಳಲ್ಲಿ ಕನ್ನಡ ಭವನ ಕಟ್ಟಬೇಕು ಎಂದು ಮಾಧ್ಯಮಗಳಲ್ಲಿ ಪ್ರಕಟಿಸುವುದು, ಇನ್ನೊಂದು ಸಲ ಅನಿವಾಸಿ ಕನ್ನಡಿಗರ ಅಭಿಯಾನಕ್ಕೆ ೧ ಮಿಲಿಯನ್ ಟ್ವೀಟ್ ಟ್ರೆಂಡ್ ಮಾಡಿದ್ದೇವೆ ಎಂದು ಪ್ರಕಟಿಸುತ್ತಿದ್ದರೆ ಪ್ರಾಮಾಣಿಕವಾಗಿರುವ ಕನ್ನಡ ಸಂಘಗಳು ನಿರ್ಲಕ್ಷಿಸಿ ಸುಮ್ಮನಿರಬಹುದೇ ?
ಇಂತಹ ಸುಳ್ಳು ಪ್ರತಿಪಾದಿಸುವ ಜಾಲತಾಣದ ಸಂಘಗಳ ಬಗ್ಗೆ ಜಾಗರೂಕರಾಗಿಡಿ. ಅವರ ಸುಳ್ಳನ್ನು ಪ್ರಚಾರ ಮಾಡುವ ಮಾಧ್ಯಮ ನೀವಾಗಬೇಡಿ. ಮಾಧ್ಯಮದಲ್ಲಿ ತಪ್ಪು ಪ್ರಚಾರ ಮಾಡಿ, ಜಾಲತಾಣಗಳಲ್ಲಿ ತಪ್ಪು ಮಾಹಿತಿಗಳಿಂದ ಲಾಭ ಪಡೆಯುವ ಕನ್ನಡ ಗುಂಪುಗಳು ನನ್ನ ಪ್ರಕಾರ ಅನಿವಾಸಿ ಕನ್ನಡಿಗರೆಲ್ಲರೂ ಬಹಿಷ್ಕಾರ ಮಾಡಬೇಕು.

ಈ ವಿಚಾರವಾಗಿ ಮುಖ್ಯ ಮಂತ್ರಿಗೆ ನಾನು ಬರೆದ ಒಂದು ಬಹಿರಂಗ ಪತ್ರ.

ಬೆಳ್ಳಿ ಮಹೋತ್ಸವವೆಂಬ ಸುಳ್ಳು ಶೀರ್ಷಿಕೆಯೊಂದಿಗೆ ಮಾದ್ಯಮದಲ್ಲಿ ಪ್ರಕಟಣೆ

News18 Kannada Report

ಕರ್ನಾಟಕದ ಮುಖ್ಯ ಮಂತ್ರಿಗಳಿಗೆ ಬಹಿರಂಗ ಪತ್ರ

ಸನ್ಮಾನ್ಯ ಮುಖ್ಯ ಮಂತ್ರಿಗಳೇ, 
ಒಬ್ಬ ಅನಿವಾಸಿ ಕನ್ನಡಿಗನಾಗಿ ಹಲವಾರು ವರ್ಷಗಳಿಂದ ವಿದೇಶದಲ್ಲಿ ನೆಲೆಸಿ, ಇಲ್ಲಿನ ಕನ್ನಡ ಸಂಘಟನೆ, ಚಟುವಟಿಕೆಗಳಲ್ಲಿ ಭಾಗವಹಿಸಿ ಇಂದು ವಿಷಾದದಲ್ಲಿ ಈ ಒಂದು ಬಹಿರಂಗ ಪತ್ರವನ್ನು ಬರೆಯುತ್ತಿದ್ದೇನೆ. ದಿನಾಂಕ ೧೯ ಫೆಬ್ರುವರಿಯಂದು ತಾವು ಸಾಗರೋತ್ತರ ಕನ್ನಡಿಗರ ವೇದಿಕೆಯ ರಜತಮಹೋತ್ಸವ ಕಾರ್ಯಕ್ರಮದ ಬಗ್ಗೆ ಹೊರಡಿಸಿರುವ ಸಂದೇಶ ಪತ್ರ ನೋಡಿ ಮುಜುಗರವೊಂದೇ ಅಲ್ಲ, ಕೆಲವು ಪ್ರಶ್ನೆಗಳು ನನ್ನಲ್ಲಿ ಮೂಡಿ ಬಂದವು. ನೀವು ಹೊರಡಿಸಿರುವ ಸಂದೇಶದ ಪ್ರತಿಯನ್ನು ಹಾಗೂ ಸಾಗರೋತ್ತರ ವೇದಿಕೆಯ ಬೆಳ್ಳಿ ಹಬ್ಬದ ಬಿತ್ತಿ ಪತ್ರವನ್ನು ನಿಮ್ಮ ಮಾಹಿತಿಗಾಗಿ ಲಗತ್ತಿಸಿದ್ದೇನೆ. 
ಸಾಗರೋತ್ತರ ಕನ್ನಡಿಗರು ಎಂಬ ಒಂದು ಸಂಘ ಆನ್ಲೈನ್ ನಲ್ಲಿ ಕೋವಿಡ್ ಸಮಯದಲ್ಲಿ ಹುಟ್ಟಿಕೊಂಡ ಗುಂಪು. ಜಾಲತಾಣದಲ್ಲಿ ನೋಡಿರುವ ಹೆಸರು ಬಿಟ್ಟರೆ ೨೦೨೦ ಜೂನ್ ತಿಂಗಳ ಮೊದಲು ಇವರ ಕನ್ನಡ ಚಟುವಟಿಕೆಗಳ ಬಗ್ಗೆ ಅಥವಾ ಸಾಮಾಜಿಕ ಕಾರ್ಯಗಳ ಬಗ್ಗೆ ಯಾವುದೇ ಕುರುಹು ಇಲ್ಲ.  ಐದು ಜನರು ಸ್ಥಾಪಿಸಿದ ಇದೊಂದು ಅನಧಿಕೃತ ವರ್ಚುಯಲ್ ಗುಂಪು. ಈ ಸಂಸ್ಥೆ ಯಾವ ದೇಶದಲ್ಲೂ ಅಧಿಕೃತವಾಗಿ ರಿಜಿಸ್ಟರ್ ಆಗಿಲ್ಲ, ಯಾವ ದೇಶದ ಸರ್ಕಾರಕ್ಕೂ ಈ ಸಂಘ ಉತ್ತರದಾಯಕವಲ್ಲ. ಕಳೆದ ಆರು ತಿಂಗಳಿಂದ ೫೫ ದೇಶಗಳನ್ನು ಪ್ರತಿನಿಧಿಸುತ್ತಿದ್ದೇವೆ ಎಂಭ ಘೋಷಣೆಯೊಂದಿಗೆ ಹಲವು ಗಣ್ಯ ವ್ಯಕ್ತಿಗಳನ್ನು ಆಮಂತ್ರಿಸಿ ಮೀಡಿಯಾ ಗಳಿಂದ ಪ್ರಚಾರ ಮಾಡಿರುವದನ್ನು ಬಿಟ್ಟರೆ ನೆಲದ ಮಟ್ಟದಲ್ಲಿ ಯಾವುದೇ ಸಮಾಜ ಸೇವೆ ಈ ವೇದಿಕೆಯಿಂದ ನಾನು ನೋಡಿಲ್ಲ. ಇವರ ವೇದಿಕೆಯ ಸದಸ್ಯರ ಬಗ್ಗೆ ಯಾವುದೇ ಮಾಹಿತಿಯಿಲ್ಲ ಹಾಗೂ ಇವರಿಗೆ ಇತರ ಸಂಘಟನೆಯಂತೆ ಸದಸ್ಯರೇ ಇಲ್ಲ.  ಹಾಗೂ ಯಾವುದೇ ವಿಶ್ವದ ಇತರೆ ಕನ್ನಡ ಸಂಘಟನೆಗಳು ಇವರೊಂದಿಗೆ ಗುರುತಿಸಿಕೊಂಡಿಲ್ಲ. ಹೀಗಾಗಿ ನಿಜವಾಗಿಯೂ ಸಾಗರೋತ್ತರ ವೇದಿಕೆ ಅನಿವಾಸಿ ಕನ್ನಡಿಗರನ್ನು ಪ್ರತಿನಿಧಿಸುತ್ತಿದೆಯೇ ಎಂಬುದು ನಮ್ಮೆಲ್ಲರ ಪ್ರಶ್ನೆ ಆಗಿದೆ. ಸಾಗರೋತ್ತರ ಕನ್ನಡಿಗರು ಎಂಬ ಈ ವೇದಿಕೆ ಸುಳ್ಳು ಹೇಳಿಕೆಗಳನ್ನು ಪ್ರತಿಪಾದಿಸಿ ಅಮಾಯಕ ಅನಿವಾಸಿ ಕನ್ನಡಿಗರನ್ನು ರಜತ ಮಹೋತ್ಸವ ಆಚರಿಸುತ್ತಿದ್ದೇನೆ ಎಂದು ತಪ್ಪು ಕಲ್ಪನೆ ಕೊಡುತ್ತಿದೆ. ಹೀಗಾಗಿ ನಿಮ್ಮ ಸಂದೇಶ ಪತ್ರದಲ್ಲಿ ತಿಳಿಸಿರುವಂತೆ ಅವರು ಆಚರಿಸುತ್ತಿರುವ ರಜತ ಮಹೋತ್ಸವ ಕಾರ್ಯಕ್ರಮ ನಿಜವಾಗಿಯೂ ರಜತ ಮಹೋತ್ಸವವೇ (೨೫ ನೇ ವಾರ್ಷಿಕ ದಿನಾಚರಣೆ) ಎಂದು ಸಾಮಾನ್ಯ ಅನಿವಾಸಿ ಕನ್ನಡಿಗನಲ್ಲಿ ಪ್ರಶ್ನೆ ಮೂಡುತ್ತಿದೆ.
ನಮಗೆಲ್ಲ ಗೊತ್ತಿರುವ ಪ್ರಕಾರ  ಅವರು ಆಚರಿಸುತ್ತಿರುವುದು ೨೫ ನೇ Online Zoom ಕಾರ್ಯಕ್ರಮ. ಅನಿವಾಸಿ ಕನ್ನಡಿಗರಲ್ಲಿ ವಿಶ್ವದಾದ್ಯಂತ ಕೇವಲ ಬೆರಳೆಣಿಕೆಯಷ್ಟು ಸಂಘಟನೆಗಳು ರಜತ ಮಹೋತ್ಸವ ಆಚರಿಸಿವೆ ಬಿಟ್ಟರೆ ಹೆಚ್ಚಿನವು ಇತ್ತೀಚಿಗೆ ಹುಟ್ಟಿಕೊಂಡಿರುವ ಕನ್ನಡ ಸಂಘಗಳು. ಹೀಗಾಗಿ ಒಂದು ಅನಿವಾಸಿ ಕನ್ನಡಿಗರ ಸಂಸ್ಥೆ ರಜತ ಮಹೋತ್ಸವ ಆಚರಿಸುತ್ತಿವೆ ಎಂದರೆ ಅದು ಸಾಮಾನ್ಯದ ವಿಷಯವಲ್ಲ. ಹೀಗಿರುವಾಗ ವಿಷಾದದ ಸಂಗತಿ ಏನೆಂದರೆ, ಮುಖ್ಯ ಮಂತ್ರಿಗಳಾದ ತಾವು  ಈ ರೀತಿಯ ಅನಧಿಕೃತ ಗುಂಪುಗಳಿಗೆ ಅವರು ಕೊಟ್ಟಿರುವ ಮಾಹಿತಿಗಳನ್ನು ಉಪಯೋಗಿಸಿ ಸಂದೇಶ ಪತ್ರ ಹೊರಡಿಸಿದರೆ ನಿಜವಾಗಿಯೂ ಕಳೆದ ಹಲವಾರು ವರ್ಷಗಳಿಂದ ಅವಿರತವಾಗಿ ಕನ್ನಡಕ್ಕೋಸ್ಕರ ಶ್ರಮಿಸುತ್ತಿರುವ ಅಧಿಕೃತ ಕನ್ನಡ ಸಂಘಗಳಿಗೆ ಅನ್ಯಾಯವಲ್ಲವೇ? ಸರ್ಕಾರದ ಪ್ರತಿನಿಧಿಗಳಾದ ತಾವು ಅವರು ಕೊಟ್ಟಿರುವ ಮಾಹಿತಿಯನ್ನು ಪರಿಶೀಲಿಸದೇ ಸಂದೇಶ ಹೊರಡಿಸುವದೇ ? ನನ್ನಂತ ಸಾವಿರಾರು ಅನಿವಾಸಿ ಕನ್ನಡಿಗರು ನಿಮ್ಮ ಸಂದೇಶವನ್ನು ನೋಡಿದಾಗ ಬರುವ ಮೊದಲ ಪ್ರಶ್ನೆ ಎಂದರೆ, ಕರ್ನಾಟಕ ಸರ್ಕಾರದಲ್ಲಿ ಯಾರೋ ಹಿರಿಯ ಅಧಿಕಾರಿಗಳ ಶಿಫಾರಸ್ಸಿನಿಂದ ಈ ರೀತಿ ಸುಳ್ಳು ಮಾಹಿತಿಗಳ ಸಂದೇಶ ಪತ್ರವನ್ನು ಪಡೆದುಕೊಳ್ಳಬಹುದಾ ಎಂದು. 
ನಿಮ್ಮ ಸರ್ಕಾರ ಎಷ್ಟೇ ಒಳ್ಳೆಯ ಜನಪ್ರಿಯ ಕೆಲಸ ಮಾಡಿದರೂ, ಅನಿವಾಸಿ ಕನ್ನಡಿಗರ ವಿಚಾರದಲ್ಲಿ ತಾವು ಈ ರೀತಿ ಅನಧಿಕೃತ, ಸ್ವಯಂ ಪ್ರಚಾರಕ ವೇದಿಕೆಗಳಿಗೆ ನಿಮ್ಮ ಸಂದೇಶದ ಮೂಲಕ ಯಾವುದೇ ಪರಿಶೀಲನೆ ಇಲ್ಲದೇ ಬಹಿರಂಗವಾಗಿ ಶಿಫಾರಸ್ಸು ನೀಡುತ್ತಿರುವುದು ನಿಜವಾಗಿಯೂ ವಿಷಾದದ ಸಂಗತಿ. 
ವಿಶ್ವದಲ್ಲಿ ನೂರಾರು ಪ್ರಾಮಾಣಿಕ ಕನ್ನಡ ಸಂಘಗಳು ಯಾವುದೇ ಲಾಭೋದ್ದೇಶವಿಲ್ಲದೇ, ಅವರ ಸದಸ್ಯರ ಸ್ವಂತ ಖರ್ಚಿನಿಂದ ಕನ್ನಡದ ಸೇವೆ ಮಾಡುತ್ತಿರುವಾಗ ಈ ಸಂದೇಶವನ್ನು ನೋಡಿ ಪ್ರಾಮಾಣಿಕ ಕನ್ನಡ ಸಂಘಗಳು ಹತಾಶರಾಗುವದಲ್ಲದೇ ವಿಶ್ವದ ಅನಿವಾಸಿ ವೇದಿಕೆಯಲ್ಲಿ ತಪ್ಪಾಗಿ ನಮ್ಮ ಪ್ರತಿನಿಧಿತ್ವ ಆಗುತ್ತಿದೆಯೇ ಎಂಬ ಆತಂಕಕ್ಕೊಳಾಗಬಹುದು. ಕರ್ನಾಟಕ NRI Forum ಈಗ ಖಾಲಿ ಬಿದ್ದಿದೆ. ಈ ಸಮಯದಲ್ಲಿ ಅಧಿಕೃತ ಕನ್ನಡ ಸಂಘಗಳಿಗೆ ಒಂದು ಧ್ವನಿ ಇಲ್ಲ ಎಂದು ಅಭಿಪ್ರಾಯ ಬರುತ್ತಿದೆ. ಹಲವು ಗುಂಪುಗಳು ಇತ್ತೀಚಿಗೆ ಆನ್ಲೈನ್ ನಲ್ಲಿ NRI forun ನಲ್ಲಿ ಉಪಾಧ್ಯಕ್ಷರನ್ನು ನೇಮಕಾತಿ ಮಾಡಿ ಎಂದು ಲಾಬಿ (Lobby ) ಮಾಡುತ್ತಿರುವುದು ಕಂಡು ಬರುತ್ತಿರುವದರಿಂದ ಸರ್ಕಾರ ಅನಿವಾಸಿ ಕನ್ನಡಿಗರ ವಿಚಾರದಲ್ಲಿ ಈಗಾಗಲೇ ಎಡವಿದೆ ಎಂಬುದು ತಿಳಿದು ಬರುತ್ತಿದೆ. 
ನಾನು ಈ ಪತ್ರವನ್ನು ಬಹಿರಂಗವಾಗಿ ಬರೆಯುತ್ತಿದ್ದೇನೆ ಏಕೆಂದರೆ ನಿಮಗೆ ತಲುಪಬೇಕಾದ ವಿಷಯ ಅತಿ ಗಂಭೀರವಾದುದ್ದು ಜೊತೆಗೆ ಸಧ್ಯದ ಪರಿಸ್ಥಿತಿಯಲ್ಲಿ ಮೌನವಾಗಿರುವ ಅನಿವಾಸಿ ಕನ್ನಡ ಸಂಘ ಸಂಸ್ಥೆಗಳು ಹಾಗೂ ಇಂತಹ ತಪ್ಪು ಪ್ರಾತಿನಿಧ್ಯವನ್ನು ಸರಿಯೋ ಅಥವಾ ತಪ್ಪೋ ಎಂದು ಪರಿಶೀಲಿಸದೆ ಎತ್ತಿಹಿಡಿದು ಇಂತಹ ಸಂಸ್ಥೆಗಳ ಬಗ್ಗೆ ಪ್ರಚಾರ ಮಾಡುತ್ತಿರುವ ಕರ್ನಾಟಕದ ಮೀಡಿಯಾ ಸಂಸ್ಥೆಗಳು ಅವಲೋಕನೆ ಮಾಡಲಿ ಎಂದು. ಹೀಗಾಗಿ ನಾನು ಬರೆದಿರುವ ವಿಷಯದ ಬಗ್ಗೆ ದಯವಿಟ್ಟು ವಿಸ್ತಾರವಾಗಿ ಪರಿಶೀಲನೆ ಮಾಡಿ. 
ಒಬ್ಬ ಅನಿವಾಸಿ ಕನ್ನಡಿಗನಾಗಿ ನಿಮ್ಮಲ್ಲಿ ನನ್ನ ವಿನಮ್ರವಾದ ವಿನಂತಿ: ದಯಮಾಡಿ ಈ ರೀತಿಯ ಸಂದೇಶ ಪತ್ರವನ್ನು ಯಾವುದೇ ಅನಿವಾಸಿ ಕನ್ನಡ ಸಂಘದ ಬಗ್ಗೆ ಹೊರಡಿಸುವದಾದರೆ, ಆಳವಾಗಿ ಆ ಸಂಸ್ಥೆಯ ಬಗ್ಗೆ ಪರಿಶೀಲಿಸಿ, ಸರಿಯಾದ ಮಾಹಿತಿಯಿಂದ ಸಂದೇಶ ಹೊರಡಿಸಿ. ಕನ್ನಡ ಸಮೂದಾಯ ನಿನ್ನೆ ಮೊನ್ನೆ ಆನ್ಲೈನ್ ನಲ್ಲಿ  ಹುಟ್ಟಿಕೊಂಡ, ಕೇವಲ ಸಾಮಾಜಿಕ ತಾಣದ ಮೇಲೆ ಸ್ಥಾಪಿತವಾಗಿರುವ, ಸಮುದಾಯ ಸೇವೆಯ ಇತಿಹಾಸವಿಲ್ಲದ ಗುಂಪಿನ ಬಲಿಪಶುವಾಗಬೇಕೇ? ದಯವಿಟ್ಟು ಪರಾಮರ್ಶಿಸಿ. 
ಹಾಗೂ ಅನಿವಾಸಿ ಕನ್ನಡಿಗರಲ್ಲಿ ಈಗಾಗಲೇ ಸ್ಥಾಪಿತಗೊಂಡಿರುವ, ಹಲವಾರು ವರ್ಷದಿಂದ ಕನ್ನಡಕ್ಕಾಗಿ ಕೆಲಸ ಮಾಡುತ್ತಿರುವ  ನೂರಾರು ಪ್ರಾಮಾಣಿಕ ಕನ್ನಡ ಸಂಘಗಳ ಹಾಗೂ ಹಲವಾರು ನಿಸ್ವಾರ್ತ ಕನ್ನಡ ಪ್ರತಿನಿಧಿಗಳ ಒಂದು ಅಧಿಕೃತ ಡೇಟಾಬೇಸ್ ಮಾಡಿ ಅವರನ್ನು ಸರಿಯಾಗಿ, ಸೂಕ್ತವಾಗಿ ಗುರುತಿಸುವ ಪ್ರಯತ್ನ ಮಾಡಿ. ಈ ಕೆಲಸವನ್ನು NRI ಫೋರಮ್ ಆಗಲೇ ೨೦೧೮ ರಲ್ಲಿ ಶುರು ಮಾಡಿತ್ತು, ಕಾರಣಾಂತರಗಳಿಂದ ಅದು ಸ್ಥಗಿತಗೊಂಡಿದೆ ಆದರೆ ಇದನ್ನು ಪ್ರಬಲಗೊಳಿಸುವ ಅವಕಾಶ ಬಂದಿದೆ 
ವಂದನೆಗಳೊಂದಿಗೆ 
Ganapati Bhat

For KannadigaruUK, London

ಓದಿ, ಕಾಮೆಂಟ್ ಮಾಡಿ, ಹೆಚ್ಚಿನ ಮಾಹಿತಿಗಾಗಿ ನನ್ನನ್ನು ಸಂಪರ್ಕಿಸಿ

Ganapati Bhat

Comments

comments