ಯುಕೆ ಕನ್ನಡತಿಯರ ಕನ್ನಡ ಕಲಿ ಸೇವೆಗೆ ನನ್ನ ನಮನ

ಈ ವರ್ಷ ಕನ್ನಡ ಕಾಯಕ ವರ್ಷ ಎಂದು ಈಗಾಗಲೇ ಕನ್ನಡ ಪ್ರಾಧಿಕಾರ ಘೋಷಿಸಿದೆ. ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ ಎಂದು ತಮ್ಮ ಲಾಂಛನದೊಂದಿಗೆ ಘೋಷಿಸಲಾಗಿದೆ. ಇದೇ ನಿಟ್ಟಿನಲ್ಲಿ ನಮ್ಮ ಯುನೈಟೆಡ್ ಕಿಂಗ್ಡಮ್ ನ ಕನ್ನಡ ಕಲಿ ಅಭಿಯಾನ ಅತ್ಯಂತ ಉತ್ಸಾಹದಿಂದ ಸುಮಾರು ೫೦ ಕ್ಕೂ ಹೆಚ್ಚು ಸ್ವಯಂ ಪ್ರೇರಿತ ಶಿಕ್ಷಕ ಶಿಕ್ಷಕಿಯರೊಂದಿಗೆ ಭರದಿಂದ ಸಾಗುತ್ತಿದೆ. ಕನ್ನಡಿಗರುಯುಕೆ ಸಂಸ್ಥೆಯ ಮುಂದಾಳತ್ವದಲ್ಲಿ ನಡೆಯುತ್ತಿರುವ ಈ ಕನ್ನಡ ಕಲಿ ಕಾರ್ಯಕ್ರಮದ ವಿಶೇಷತೆಯೆಂದರೆ ಶೇಕಡಾ ೯೯ಕ್ಕೂ ಹೆಚ್ಚು ಕನ್ನಡ ಕಲಿಸುವ ಮನಸ್ಸುಗಳು ನಮ್ಮ ಹೆಮ್ಮೆಯ ಕನ್ನಡತಿಯರು. ಕನ್ನಡಾಂಬೆಯ ಆಶೀರ್ವಾದದೊಂದಿಗೆ ಯುಕೆ ಕನ್ನಡತಿಯರು ಪ್ರತಿ ಶನಿವಾರ ಹಾಗೂ ಭಾನುವಾರ ನಿರಂತರವಾಗಿ ಪುಟಾಣಿಗಳಿಗೆ ಕನ್ನಡ ಕಲಿಸುವ ನಿಟ್ಟಿನಲ್ಲಿ ಬಹಳ ಶ್ರದ್ದೆ ಹಾಗೂ ಭಕ್ತಿಯಿಂದ ಕನ್ನಡ ಬಾವುಟವನ್ನು ಆಂಗ್ಲ ನಾಡಿನಲ್ಲಿ ಮುಗಿಲೆತ್ತರಕ್ಕೆ ಹಾರಿಸುತ್ತಿದ್ದಾರೆ. ಇವರೆಲ್ಲರೂ ವಾರದಂತ್ಯದಲ್ಲಿ ಬೇರೆ ಬೇರೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಹಾಯಾಗಿ ಮನೆಯಲ್ಲೇ ಇರಬಹುದಾಗಿತ್ತು, ಆದರೆ ಕನ್ನಡದ ಒಲವು, ಕನ್ನಡದ ಪ್ರೇಮ ಹಾಗೂ ನಮ್ಮ ಮುಂದಿನ ಪೀಳಿಗೆಗೆ ಕನ್ನಡವನ್ನು ಪರಿಚಯಿಸುವ ಒಂದು ದೃಢ ಸಂಕಲ್ಪ ಈ ಕನ್ನಡತಿಯರನ್ನು ಪ್ರೇರೇಪಿಸಿದೆ ಎನ್ನಲು ತಪ್ಪಾಗಲಾರದು.

ಈ ಕನ್ನಡ ಕಲಿಯ ಬೃಹತ್ ಯೋಜನೆಯ ಕನಸು ಕಂಡವರಲ್ಲಿ ಮೊದಲಿಗರು ಕನ್ನಡಿಗರುಯುಕೆ ಯ ಆಗಿನ ಕಾರ್ಯಕಾರಿ ಸಮಿತಿಯ ಸದಸ್ಯ ವೀರುಪಾಕ್ಷ ಪ್ರಸಾದ್ ಅವರು. ೨೦೧೧ ರಲ್ಲಿ ಮತ್ತೊಮ್ಮೆ ಮುಖ್ಯ ಮಂತ್ರಿ ಚಂದ್ರು ಅವರು ಬಂದಾಗ ಅವರಿಂದಲೇ ಅಧಿಕೃತವಾಗಿ ಕನ್ನಡ ಕಲಿ ಶಿಬಿರವನ್ನು ಉದ್ಘಾಟನೆಯ ಮಾಡಿ ಪ್ರಾರಂಭಿಸಲಾಯಿತು. ಅಲ್ಲಿಂದ ಇಲ್ಲಿಯವರೆಗೂ ಯುಕೆ ಕನ್ನಡತಿಯರ ಕೊಡುಗೆ ಅಪಾರವಾಗಿದೆ. ೨೦೧೪ ರ ನಂತರ ಹ್ಯಾರೋ, ಮಿಲ್ಟನ್ ಕೇನ್ಸ್, ಬೇಸಿಂಗ್ ಸ್ಟೋಕ್, Sutton ಹೀಗೆ ಒಂದಾದ ಮೇಲೆ ಇನ್ನೊಂದು ಶಿಬಿರಗಳು ಪ್ರಾರಂಭವಾದವು. ಇವೆಲ್ಲಾ ಶಿಬಿರಗಳಲ್ಲಿ ಮುಖ್ಯವಾಗಿ ಕನ್ನಡ ಕಲಿಸಲು ಮುಂದೆ ಬಂದವರು ನಮ್ಮ ಹೆಮ್ಮೆಯ ಕನ್ನಡತಿಯರು.
ಇಲ್ಲಿಯವರೆಗೆ ಹನ್ನೊಂದಕ್ಕೂ ಹೆಚ್ಚು ಶಿಬಿರಗಲ್ಲಿ ಸುಮಾರು ೫೩ ಶಿಕ್ಷಕಿಯರು ಕನ್ನಡಿಗರುಯುಕೆ ಸಂಸ್ಥೆಯ ಮೂಲಕ ಕನ್ನಡ ಕಲಿ ಯಲ್ಲಿ ತೊಡಗಿಸಿಕೊಂಡಿದ್ದಾರೆ.
ಹೆಸರನ್ನು ಹೇಳುತ್ತಾ ಹೋದರೆ ಸಮಯ ಸಾಕಾಗದು ಆದರೆ ಇವರೆಲ್ಲರ ಕನ್ನಡ ಪ್ರೇಮಕ್ಕೆ ನನ್ನ ನಮನ. ಬಹು ಮುಖ್ಯವಾದ ಈ ಸೇವೆಯಲ್ಲಿ ಯುಕೆ ಕನ್ನಡತಿಯರ ಈ ಕೊಡುಗೆ ಮುಂದಿನ ಪೀಳಿಗೆಗೆ ಸ್ಪೂರ್ತಿದಾಯಕವಾಗುದಲ್ಲಿ ಸಂದೇಹವೇ ಇಲ್ಲ.
ನಿಮ್ಮ ಸೇವೆಗೆ ನನ್ನ ನಮನ
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

Comments

comments