ಯುಕೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

ಸ್ನೇಹಿತರೇ, ನಮಸ್ಕಾರ. ದೀಪಾವಳಿಯ ಸಂಭ್ರಮ ಎಲ್ಲಡೆ ನೋಡುತ್ತಿದ್ದೇವೆ. ಈ ಸಲ ದೀಪಾವಳಿ ಹಬ್ಬದ ಸಮಯದಲ್ಲೇ ಕನ್ನಡ ರಾಜ್ಯೋತ್ಸವ ಆಚರಣೆ ಕೂಡ ದೇಶ ವಿದೇಶಗಳಲ್ಲಿ ನಡೆಯುತ್ತಿದೆ. ಪ್ರತಿ ನವೆಂಬರ್ ತಿಂಗಳು ಸಾಮಾನ್ಯವಾಗಿ ವಿಶ್ವದಾದ್ಯಂತ ಇರುವ ಕನ್ನಡಿಗರಿಗೆ ಡಬಲ್ ಬೋನಸ್! ಒಂದು ಕಡೆ ಮನೆಯಲ್ಲಿ ಮಕ್ಕಳ ಹಾಗೂ ಸ್ನೇಹಿತರ ಜೊತೆ ದೀಪಾವಳಿ ಆಚರಿಸುವ ಸಂಭ್ರಮವಾಗಿದ್ದರೆ, ಅದೇ ಸಮಯದಲ್ಲಿ ಕನ್ನಡ ಸಂಘಗಳ ಕನ್ನಡ ರಾಜ್ಯೋತ್ಸವ ಸಂಭ್ರಮ. ಹೀಗಾಗಿ ಎಲ್ಲೆಡೆ ಹಬ್ಬದ ವಾತಾವರಣ.

ಕಳೆದ ವರ್ಷ ಕೋವಿಡ್ ಕಾರಣದಿಂದ ಕನ್ನಡಿಗರುಯುಕೆ ಕನ್ನಡ ರಾಜ್ಯೋತ್ಸವವನ್ನು ವರ್ಚುಯಲ್ ವೇದಿಕೆಯಾದ ಜೂಮ್ ನಲ್ಲಿ ಹಮ್ಮಿಕೊಳ್ಳಲಾಗಿತ್ತು. ಆದರೆ ಈ ಬಾರಿ ಸುಮಾರು ಎರಡು ವರ್ಷದ ನಂತರ ಮತ್ತೊಮ್ಮೆ ಲಂಡನ್ ನಲ್ಲಿ ಸುಮಾರು ೪೦೦ ಜನ ಹಿಡಿಯುವ ಸಭಾಂಗಣದಲ್ಲಿ ಕನ್ನಡ ರಾಜ್ಯೋತ್ಸವವನ್ನು ಹಮ್ಮಿಕೊಳ್ಳುತ್ತಿರುವುದು ವಿಶೇಷವಾಗಿದೆ.

ಆಂಗ್ಲ ನಾಡಿನಲ್ಲಿ ಹಲವಾರು ಕನ್ನಡ ಸಂಸ್ಥೆಗಳು ಹಾಗೂ ಕನ್ನಡ ಗುಂಪುಗಳಿದ್ದರೂ ಇವೆಲ್ಲರ ಮದ್ಯ ಕನ್ನಡಿಗರುಯುಕೆ ಸಂಸ್ಥೆಯು ಸತತವಾಗಿ ಕನ್ನಡ ರಾಜ್ಯೋತ್ಸವವನ್ನು ಪ್ರತಿ ವರ್ಷ ನಡೆಸಿಕೊಂಡು ಬಂದಿರುವದು ಒಂದು ವಿಶೇಷವಾಗಿದೆ. ನಾಲ್ಕು ವರ್ಷಗಳ ಹಿಂದೆ ನನ್ನ ಬ್ಲಾಗ್ ನಲ್ಲಿ ಯುಕೆ ಕನ್ನಡಿಗರ ನಡುವೆ ನನ್ನ ಪಯಣದ ಬಗ್ಗೆ ಉಲ್ಲೇಖಿಸಿದ್ದೆ, ನಾನು ಇಂಗ್ಲೆಂಡ್ ಬಂದ ಮೊದಲ ಮೂರು ವರ್ಷ ನನ್ನದೇ ಆದ ಒಂದು ಚಿಕ್ಕ ಗೆಳೆಯರ ಗುಂಪಿನಲ್ಲಿ ವಹಿವಾಟು ನಡೆಸಿಕೊಂಡಿದ್ದೆ. ನನ್ನ ಗೆಳೆಯರ ಗುಂಪಿನಲ್ಲಿ ಕೇವಲ ಬೆರಳೆಣಿಕೆಯಷ್ಟು ಕನ್ನಡಿಗರಿದ್ದು ಉಳಿದವರೆಲ್ಲ ಹಿಂದಿ ಪ್ರಾಂತ್ಯದಿಂದ ಬಂದವರಾಗಿದ್ದರು. ಹೀಗಾಗಿ 2007 ರಲ್ಲಿ ಯುಕೆಗೆ ಬಂದರೂ ಸುಮಾರು 4 ವರ್ಷಗಳ ವರೆಗೆ ಹೆಚ್ಚು ಕನ್ನಡಿಗರ ಸಂಪರ್ಕ ಇಟ್ಟುಕೊಂಡಿರದಿದ್ದ ನಾನು ಕನ್ನಡಿಗರುಯುಕೆ ಸಂಸ್ಥೆಯ ಸಂಪರ್ಕದಲ್ಲಿ ಬಂದಿದ್ದು 2010 ರಲ್ಲಿ! ಆ ಸಮಯದಲ್ಲಿ ಕನ್ನಡಿಗರುಯುಕೆ ಕಾರ್ಯಕಾರಿ ಸಮಿತಿಯ ಸದಸ್ಯರಾದ ವಿರುಪ್ರಸಾದ್ ಅವರ ಸಹಯೋಗದಿಂದ ಕನ್ನಡ ರಾಜ್ಯೋತ್ಸವದಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತ್ತು. 2010 ರಲ್ಲಿ ಕನ್ನಡಿಗರುಯುಕೆ ತನ್ನ ರಾಜ್ಯೋತ್ಸವ ಸಂಭ್ರಮಣೆಯನ್ನು ರೇಡಿಂಗ್ ನಿಂದ ಲಂಡನ್ ಗೆ ವರ್ಗಾಯಿಸಿತ್ತು. ಒಂದು ಕನ್ನಡ ಕಮ್ಯೂನಿಟಿ ಕಾರ್ಯಕ್ರಮವನ್ನು ಈ ದೇಶದಲ್ಲಿ ನೋಡಿ ಭಾಗವಹಿಸಿದ್ದು ಆಗ ನನಗೆ ಒಂದು ವಿಶೇಷ ಅನುಭವವಾಗಿತ್ತು. ನಾನು ಪ್ರತಿ ವರ್ಷ ಹೊಸದಾಗಿ ಇಲ್ಲಿ ಯುಕೆಗೆ ಬಂದಿರುವ ಕನ್ನಡಿಗರರನ್ನು ಹೆಚ್ಚಿನದಾಗಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವದನ್ನು ನೋಡುತ್ತಿರುತ್ತೇನೆ.
2010 ರ ಸಮಯದಲ್ಲಿ ನಾನು Accenture ಕಂಪನಿಯನ್ನು ಬಿಟ್ಟು IBM ಕಂಪನಿ ಸೇರಿದ್ದೆ ಜೊತೆಗೆ ಮಗಳು ಮೇಧಾ ಕೂಡ ಚಿಕ್ಕವಳಾಗಿರುವದರಿಂದ ಪೂರ್ತಿ ಕಾರ್ಯಕ್ರಮ ನೋಡಲಾಗದೆ ಮಧ್ಯದಲ್ಲೇ ಹೋಗಬೇಕಾಯಿತು.
2011 ರ ಕನ್ನಡ ರಾಜ್ಯೋತ್ಸವ ಡಾ. ರಾಜ್ ಅವರ ಸ್ಮರಣಾರ್ಥವಾಗಿ ಲಂಡನ್ ನ ಹ್ಯಾರೋ ನಲ್ಲಿ ಹಮ್ಮಿಕೊಳ್ಳಲಾಗಿತ್ತು. ಆಗಲೇ ಕನ್ನಡ ಕಲಿ ಬೀಜ ಬಿತ್ತಿರುವ ಕನ್ನಡಿಗರುಯುಕೆ ಅಭಿಯಾನ ಮೊಳಕೆಗೆ ಬಂದಿದ್ದರಿಂದ, ಕನ್ನಡ ಕಲಿಗೆ ಬೆನ್ನೆಲುಬಾಗಿ ನಿಂತಿರುವ ಮುಖ್ಯ ಮಂತ್ರಿ ಚಂದ್ರು ಅವರು ಆ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಅಶೋಕ್ ಬಸ್ತಿ (ಜೂನಿಯರ್ ರಾಜಕುಮಾರ್) ಮಿಮಿಕ್ರಿ ದಯಾನಂದ ಅವರ ಕಲಾ ಪ್ರದರ್ಶನವು ನೆರೆದಿರುವ ಕನ್ನಡಿಗರನ್ನು ಭಾವಪರವಶರಾಗಿರಿಸಿತು. ಈ ಕಾರ್ಯಕ್ರಮಕ್ಕೆ ಸ್ವಯಂ ಸೇವಕನಾಗಿ ಮೊದಲ ಬಾರಿಗೆ ನಾನು ಕನ್ನಡಿಗರುಯುಕೆ ಗುರುತು ಲಾಂಛನವನ್ನು ಧರಿಸಿದ್ದು ವಿಶೇಷವಾಗಿತ್ತು. ಆ ಸಮಯದಲ್ಲಿ ನನ್ನನ್ನು ಕನ್ನಡಿಗರುಯುಕೆ ಗಿಲ್ಡ್ಫೊರ್ಡ್ ಚಾಪ್ಟರ್ ಲೀಡ್ ಎಂದು ಆಗಿನ ಛೇರ್ಮನ್ ವಿವೇಕ್ ಹೆಗಡೆ ಅವರು ಘೋಷಿಸಿದ್ದರು.

KUK ಸ್ವಯಂ ಸೇವಕನಾಗಿ ೨೦೧೧ ನೇ ರಾಜ್ಯೋತ್ಸವದಲ್ಲಿ


೨೦೧೧ ರಲ್ಲಿ ಅಧಿಕೃತವಾಗಿ ಕನ್ನಡಿಗರುಯುಕೆ ತಂಡಕ್ಕೆ ಸೇರಿದ ನಾನು ಅಲ್ಲಿಂದ ಇಲ್ಲಿಯವರೆಗೆ ನಿರಂತರವಾಗಿ ಹೆಚ್ಚಿನ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ. ಕನ್ನಡಿಗರುಯುಕೆ ದಶಮಾನೋತ್ಸವ ಕಾರ್ಯಕ್ರಮದ ನಂತರ ಕಾರ್ಯಕಾರಿ ಸಮಿತಿಯಲ್ಲಿ ಹೊಸ ಹೊಸ ಮುಖಗಳು ಕಾಣಿಸಿಕೊಂಡವು. ಜೊತೆಗೆ ಕನ್ನಡಿಗರುಯುಕೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಲಿತವಾಗತೊಡಗಿತು. 10 ವರ್ಷದ ಸಂಸ್ಥೆ ನಿರಂತರವಾಗಿ ಕನ್ನಡ ಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದು, ಪ್ರತಿ ವರ್ಷ ರಾಜ್ಯೋತ್ಸವ ಕಾರ್ಯಕ್ರಮವನ್ನು ಒಂದು ಪ್ರಮುಖ ಫ್ಲಾಗ್ ಶಿಪ್ ಇವೆಂಟ್ ಎಂದು ಆಚರಿಸುತ್ತ ಬಂದಿತು. ಪ್ರತಿ ವರ್ಷ ಹೊಸ ಹೊಸ ಪರಿಕಲ್ಪನೆಯೊಂದಿಗೆ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಿಂದ ಆಚರಿಸಲಾಯಿತು. 2015 ರಲ್ಲಿ ಮಿಲ್ಟನ್ ಕೇನ್ಸ್ ನಲ್ಲಿ ಹಚ್ಚೇವು ಕನ್ನಡದ ದೀಪ ಎಂದು ರತ್ನಮಾಲಾ ಪ್ರಕಾಶ ಅವರ ಗಾಯನದೊಂದಿಗೆ ಆಚರಿಸಲಾಗಿತ್ತು ಹಾಗೆಯೇ 2016 ರಲ್ಲಿ ವೀಕ್ ಎಂಡ್ ಇನ್ ಲಂಡನ್ ವಿಥ್ ರಮೇಶ್ ಎಂಬ ಕಾರ್ಯಕ್ರಮವನ್ನು ರಮೇಶ್ ಅರವಿಂದ್ ಅವರ ಜೀವನ ಚಕ್ರ ಆಧಾರಿತವಾಗಿ ಗಾಯನ ಜೊತೆಗೆ ಅವರವ ಪ್ರೇರೇಪಣೆಯ ಮಾತುಗಳನ್ನು ಆಲಿಸಿ ನೋಡಲು ಸುಮಾರು 700 ಯುಕೆ ಕನ್ನಡಿಗರು ಕಿಕ್ಕಿರಿದು ಸೇರಿದ್ದರು. ಹಾಗೆಯೇ 2017 ರಲ್ಲಿ ಕನ್ನಡ ಹಬ್ಬವನ್ನು ಜಾನಪದ, ರಂಗ ಕಲೆಯನ್ನು ಆಧಾರಿತವಾಗಿ ಆಚರಿಸಲಾಯಿತು. 2017 ರ ಕಾರ್ಯಕ್ರಮಕ್ಕೆ ಸುಮಾರು 750 ಯುಕೆ ಕನ್ನಡಿಗರು ಸೇರಿದ್ದರು. ಡಾ. ನಾಗತಿಹಳ್ಳಿ ಚಂದ್ರಶೇಖರ, ಭಾರತೀಯ ರಾಯಭಾರಿ ಲಂಡನ್ ಕಚೇರಿಯ ಮುಖ್ಯಸ್ಥರು, ಸಿನಿಮಾ ಹಾಗೂ ನಾಟಕರಂಗದಿಂದ ಮಂಡ್ಯ ರಮೇಶ್ ಹಾಗು ಅವರ ಮಗಳು ದಿಶಾ ರಮೇಶ್ ಜೊತೆಗೆ ಜಾನಪದ ಗಾಯನ ಕಲಾವಿದ ಗೋನ ಸ್ವಾಮಿ ಜೊತೆಗೆ ಹಾಸ್ಯ ಕಲಾವಿದ ಮಹದೇವ್ ಸತ್ತಿಗೇರಿ ಹೀಗೆ ಹಲವಾರು ಕಲಾವಿದರು ಈ ಕಾರ್ಯಕ್ರಮದ ಯಶಸ್ಸಿಗೆ ಕಾರಣೀಬೂತರಾಗಿದ್ದರು. ಅದಾದ ನಂತರ ನಡೆದ 2018 ನೇ ಕನ್ನಡ ರಾಜ್ಯೋತ್ಸವ ಸಂಗೀತಮಯವಾಗಿತ್ತು. ಸಂಗೀತಾ ರಾಜೀವ್ ಹಾಗೂ ಅವರ ತಂಡ ಸುಮಾರು 900 ಯುಕೆ ಕನ್ನಡಿಗರನ್ನು ಮನೋರಂಜಿಸಿದರೆ ಈ ಕಾರ್ಯಕ್ರಮಕ್ಕೆ ಹಲವಾರು ಸ್ವಯಂ ಪ್ರೇರಿತ ಯುಕೆ ಕನ್ನಡಿಗರು ಸಹಯೋಗ ನೀಡಿದರು.
ಕೋವಿಡ್ ಮಹಾಮಾರಿ ಬರುವ ಮುನ್ನ 2019 ರಲ್ಲಿ ಹಮ್ಮಿಕೊಂಡ ಕನ್ನಡ ರಾಜ್ಯೋತ್ಸವ ಒಂದು ವಿಶೇಷ ಆಚರಣೆಯಾಗಿತ್ತು. ಚಿರಂತನ ದಾವಣಗೆರೆ ಅವರಿಂದ ನೃತ್ಯ ಪ್ರದರ್ಶನ, ಅಂಜಲಿ ಶಾನಬೋಗ್ ಅವರ ಸ್ಯಾಕ್ಸೋಫೋನ್ ಪ್ರದರ್ಶನ ಹಾಗೂ ಅದ್ಭುತವಾಗಿ ಅಲಂಕರಿಸಿದ ಸಭಾಂಗಣ ವಿಶೇಷವಾಗಿ ನೆರೆದ ಯುಕೆ ಕನ್ನಡಿಗರ ಗಮನ ಸೆಳೆದಿತ್ತು. ಕಾರ್ಯಕ್ರಮಕ್ಕೆ ಹೆಚ್ಚು ಜನ ಬರದಿದ್ದರೂ ಕಾರ್ಯಕ್ರಮದ ಗುಣಮಟ್ಟ ತುಂಬಾ ಚೆನ್ನಾಗಿತ್ತು.

ಈಗ 2021 ರಲ್ಲಿ ಮತ್ತೊಂದು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಕನ್ನಡಿಗರುಯುಕೆ ಎಲ್ಲಾ ತಯ್ಯಾರಿ ನಡೆಸುತ್ತಿದೆ. ನವೆಂಬರ್ 13 ರಂದು ಲಂಡನ್ ನ ಹೊರ ಪ್ರದೇಶವಾದ ಫೆಲ್ತಂ ಎಂಬ ಜಾಗದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. 400 ಯುಕೆ ಕನ್ನಡಿಗರು ಈಗಾಗಲೇ ನೋಂದಾಯಿಸಿದ್ದು ಸಭಾಂಗಣ ಸಂಪೂರ್ಣವಾಗಿ ತುಂಬಿದೆ. ಈ ಬಾರಿ ಕೋವಿಡ್ ಕಾರಣ ಕರ್ನಾಟಕದಿಂದ ಕಲಾವಿದರು ಭಾಗವಹಿಸಲಾಗದಿದ್ದರೂ ಇಲ್ಲಿ ಯುಕೆ ಸ್ಥಳೀಯ ಕಲಾವಿಧರು, ಗಾಯಕರು, ಯಕ್ಷಗಾನ ಕಲಾವಿಧರು ಪ್ರದರ್ಶನ ನೀಡುತ್ತಿರುವುದು ವಿಶೇಷವಾಗಿದೆ. ಜೊತೆಗೆ ಕರ್ನಾಟಕದ ರುಚಿಕರವಾದ ಊಟ, ಸಂಜೆಯ ಟೀ ಕಾಫಿ ಜೊತೆ ತಿಂಡಿ ತಿನಿಸುಗಳು ಯುಕೆ ಕನ್ನಡಿಗರನ್ನು ಮತ್ತೊಮ್ಮೆ ಕುಟುಂಬದ ಜೊತೆ ಒಟ್ಟು ಸೇರಿ ಸವಿಯುವ ಅವಕಾಶ ಒದಗಿಸಿಕೊಟ್ಟಿದೆ. ಇನ್ನೂ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಿರುವದರಿಂದ ಕೋವಿಡ್ ನಿಯಂತ್ರಣಕ್ಕೆ ಬೇಕಾಗುವ ಎಲ್ಲಾ ಕ್ರಮಗಳನ್ನು ಕನ್ನಡಿಗರುಯುಕೆ ಆಯೋಜನಾ ಸಮಿತಿ ಕೈಗೊಂಡಿದೆ. ನಮ್ ರೇಡಿಯೋ ಆರ್ ಜೆ ಗಳಾದ ರಶ್ಮಿ ಹಾಗೂ ಗಿರೀಶ್ ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ. ಯೋಗಿಂದ್ರ ಮರವಂತೆ ಮತ್ತು ಅವರ ಪುತ್ರಿ ಸುನಿಧಿ ಮರವಂತೆ ಬ್ರಿಸ್ಟಲ್ ನಿಂದ ಬಂದು ಈ ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾ ಪ್ರದರ್ಶನವನ್ನು ಮಾಡಲಿದ್ದಾರೆ. ಡಾ. ಶ್ವೇತಾ ಹಿರೇಮಠ್, ಲಕ್ಷ್ಮೀ ಹೊಯ್ಸಳ ಹಾಗೂ ಇಲ್ಲಿ ಯುಕೆಯಲ್ಲಿ ಯೂನಿವರ್ಸಿಟಿ ವಿದ್ಯಾರ್ಥಿನಿಯಾದ ಹರ್ಷಿತಾ ಅವರು ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

KUK Rajyotsava 2021

ಸುಮಾರು ಎರಡೂವರೆ ಸಹಸ್ರಮಾನದ ಇತಿಹಾಸ ಹೊಂದಿರುವ ಶ್ರೀಮಂತ ಭಾಷೆ ಕನ್ನಡವನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ದೇಶ ವಿದೇಶಗಳಲ್ಲಿ ನವೆಂಬರ್ ಸಂಪೂರ್ಣ ತಿಂಗಳು ಕನ್ನಡಮಯವಾಗಿ ಕನ್ನಡ ರಾಜ್ಯೋತ್ಸವ ಆಚರಣೆ ನಡೆಯುತ್ತಿರುವದರಿಂದ, ಯುಕೆ ಕನ್ನಡಿಗರೂ ಈ ಒಂದು ರಾಜ್ಯೋತ್ಸವ ಆಚರಣೆಯ ಮೂಲಕ ಆಂಗ್ಲನಾಡಿನಲ್ಲಿ ಮಕ್ಕಳಿಗೆ ಕನ್ನಡ ಭಾಷೆ, ಇದರ ಹಿರಿಮೆ, ಮಹತ್ವವನ್ನು ತಿಳಿಸಲು ಒಂದು ಉತ್ತಮ ಅವಕಾಶವಾಗಿದೆ. ಕನ್ನಡದ ಮನಸ್ಸುಗಳು ಒಂದಾಗಿ, ನಾವೆಲ್ಲ ಕನ್ನಡಿಗರು ನಮ್ಮ ಭಾಷೆ ಸಂಸ್ಕ್ರತಿಯನ್ನು ಹೆಮ್ಮೆಯಿಂದ ಮುಂದಿನ ಪೀಳಿಗೆಗೆ ಹಸ್ತಾಂತರ ಮಾಡಬೇಕೆಂದರೆ ಇಂತಹ ಕನ್ನಡ ಕಾರ್ಯಕ್ರಮದಗಲ್ಲಿ ಸಕ್ರೀಯವಾಗಿ ಭಾಗವಹಿಸುವುದು ತುಂಬಾ ಮುಖ್ಯವಾಗಿದೆ. ವಾಟ್ಸಪ್ಪ್, ಟ್ವಿಟ್ಟರ್, ಫೇಸ್ಬುಕ್ ಹಾಗೂ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ರಾಜ್ಯೋತ್ಸವದ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುವದಲ್ಲದೇ ಜಾತಿ ಮತ ಧರ್ಮ ಭೇದವಿಲ್ಲದೇ ಕನ್ನಡ ಭಾಷೆಯೊಂದೇ ಕಾರಣ ಇಟ್ಟುಕೊಂಡು, ಕನ್ನಡ ಸಂಘಗಳು ಹಮ್ಮಿಕೊಳ್ಳುವ ಸಾಮೂಹಿಕ ರಾಜ್ಯೋತ್ಸವ ಆಚರಣೆಯ ಸಮಾರಂಭದಲ್ಲಿ ಸಕ್ರೀಯವಾಗಿ ಭಾಗವಿಸುತ್ತಿರುವ ಎಲ್ಲಾ ಯುಕೆ ಕನ್ನಡಿಗರಿಗೂ ಕನ್ನಡದ ಮನಸ್ಸುಗಳಿಗೂ ನನ್ನ ಹೃದಯಪೂರ್ವಕ ವಂದನೆಗಳು.

Comments

comments

Leave a Reply