ಗುಂಪುಗಾರಿಕೆ ಬೇಡ ಒಗ್ಗಟ್ಟಿರಲಿ

ಸ್ನೇಹಿತರೇ ನಮಸ್ಕಾರ. ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ, ಯುಕೆ ಕನ್ನಡಿಗರ ಈಗಿನ ಪರಿಸ್ಥಿತಿ ಮತ್ತು ಮುಂದಿನ ಸಾಧ್ಯತೆಯ ಬಗ್ಗೆ ನನ್ನ ಬ್ಲಾಗ್ ಮೂಲಕ ಪ್ರಕಟಿಸೋಣ ಎಂಬ ಪ್ರಯತ್ನ.

ಮೊದಲನೆಯದಾಗಿ ಎಲ್ಲರಿಗೂ ಶಿವರಾತ್ರಿಯ ಶುಭಾಶಯಗಳು. ಇವತ್ತು ಶಿವರಾತ್ರಿ. ಜಾಗರಣೆ ಮಾಡ್ತೀರೋ ಇಲ್ವೋ, ದಯವಿಟ್ಟು ಮಕ್ಕಳಿಗೆ ಶಿವರಾತ್ರಿ ಹಬ್ಬದ ಬಗ್ಗೆ ಹಾಗೂ ಅದರ ಮಹತ್ವದ ಬಗ್ಗೆ ತಿಳಿಸಿ ಹೇಳಿ. ಗೂಗಲ್ ಮಾಡಿದರೆ ಬೇಕಾದಷ್ಟು ವಿಷಯ ಇದೆ.

ಆದರೆ ಒಂದು ಕುತೂಹಲಕರವಾದ ವಿಷಯ ಏನೆಂದರೆ, ನೀವು ಗೂಗಲ್ ಮಾಡಿ, ಏನೇ ಮಾಡಿ, ಯುಕೆ ನಲ್ಲಿರೋ ಕನ್ನಡಿಗರು ಹಾಗೂ ಕನ್ನಡ ಗುಂಪುಗಳ ಬಗ್ಗೆ ಮಾಹಿತಿ ಸಿಗೋದೇ ಇಲ್ಲ. ಹದಿಮೂರು ವರ್ಷದ ಹಿಂದೆ ನಾನು ಇಲ್ಲಿ ಬಂದಾಗ ಕನ್ನಡದ ಹಾಗೂ ಕನ್ನಡ ಕಾರ್ಯಕ್ರಮಗಳ ಅಭಾವವಿತ್ತು ಆದರೆ WhatsApp ಬಂದಾಂಗಿನಿಂದ ಕನ್ನಡದ ಪ್ರಳಯವೇ ಯುನೈಟೆಡ್ ಕಿಂಗ್ಡಮ್ ಆದ್ಯಂತ ಹರೀತಾ ಇದೆ! ೨೦೧೬ – ೨೦೧೭ ರ ತನಕ ದೂರ ದೂರದಿಂದ ಕನ್ನಡಿಗರು ಡ್ರೈವ್ ಮಾಡಿ, ಯುಗಾದಿ, ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಂದಿರುವ ಕಲಾವಿದರಿಗೆ ಬೆನ್ನು ತಟ್ಟಿ ಪ್ರೋತ್ಸಾಹ ಕೊಡತಾ ಇದ್ರೂ ಕ್ರಮೇಣವಾಗಿ ಅವರವರ ಪ್ರದೇಶಗಳಲ್ಲಿ ಚಿಕ್ಕ ಕಾರ್ಯಕ್ರಮಗಳು ಶುರುವಾಗಿದ್ದು ನೈಜ ಸಂಗತಿ.
ಸದ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಕನ್ನಡಿಗರು ಸೇರುವ ಅವಕಾಶವಂತೂ ಕಾಣಿಸ್ತಾ ಇಲ್ಲ. ನಾನು ೨ ವರ್ಷದ ಹಿಂದೇನೆ ಕನ್ನಡಿಗರು ಆಚರಿಸುವ ಯುಗಾದಿ ಹಬ್ಬಗಳ ಸರಮಾಲೆಯನ್ನೇ ಪ್ರಕಟಿಸಿದ್ದೆ. ಕನ್ನಡಿಗರುಯುಕೆ ಸ್ನೇಹಯಾನ ಪತ್ರಿಕೆಯಲ್ಲಿ ೨೫ ಕ್ಕೊ ಹೆಚ್ಚು ಕನ್ನಡ ಗುಂಪುಗಳ ಹೆಸರನ್ನೂ ಪ್ರಕಟಿಸಿದ್ದನ್ನು ನೀವು ನೋಡಿರಬಹುದು. ಆದರೆ ಈ ಬಾರಿ ಯುಗಾದಿ ಹಬ್ಬದ ವಿಶೇಷತೆ ಏನು?

ಈ ಬಾರಿ ಯುಗಾದಿ ೨೫ ಮಾರ್ಚ್ ಬಂದಿದೆ. ಹೀಗಾಗಿ ಸುಮಾರು ೭ ಕಡೆ ಯುಗಾದಿ ಹಬ್ಬವನ್ನು ಒಂದೇ ದಿನ ಅಂದರೆ ೨೮ ಮಾರ್ಚ್ ನಂದು ಆಚರಿಸಲಾಗುತ್ತಿದೆ. ಕನ್ನಡ ಬಳಗ, ಮ್ಯಾಂಚೆಸ್ಟರ್ ಕನ್ನಡ ಸಂಘ, Swansea , ಕಾರ್ಡಿಫ್, ಬರ್ಮಿಂಗ್ಹ್ಯಾಮ್, ಹ್ಯಾರೋ ಹಾಗೂ Orpington ನಲ್ಲಿ ವಿಶೇಷ ಯುಗಾದಿ ಕಾರ್ಯಕ್ರಮವನ್ನು ೨೮ ಮಾರ್ಚ್ ವಾರದಂತ್ಯ ಹಮ್ಮಿಕೊಳ್ಳಲಾಗಿದೆ. ಇವು ನನಗೆ ಗೊತ್ತಿರುವ ಕಾರ್ಯಕ್ರಮಗಳ ಪಟ್ಟಿ ಆದರೆ ಇವುಗಳ ಹೊರತು ಇನ್ನೆಷ್ಟು ಗುಂಪುಗಳ ಕಾರ್ಯಕ್ರಮವನ್ನು ೨೮ ಮಾರ್ಚ್ ನಲ್ಲಿ ಹಮ್ಮಿಕೊಂಡಿದ್ದಾರೋ ಗೊತ್ತಿಲ್ಲ. ಮಾರ್ಚ್ ೨೧ ರಂದು Croydon ಹಾಗೂ Scotland ನಲ್ಲಿ, ಏಪ್ರಿಲ್ ೪ ರಂದು Swindon ನಲ್ಲಿ ಹಾಗೂ ಏಪ್ರಿಲ್ ೨೫ ರಂದು Leicester ನಲ್ಲಿ ಹಮ್ಮಿಕೊಳ್ಳಲಾಗಿದೆ.
ಎಲ್ಲರೂ ಸುಮಾರು ೧೫ ಪೌಂಡ್ ನಿಂದ ೨೦ ಪೌಂಡ್ ಪ್ರವೇಶ ಶುಲ್ಕವಿಟ್ಟು ಕಾರ್ಯಕ್ರಮವನ್ನು ಹಮ್ಮಿಕೊಂಡಿರುವದು ಸಾಮಾನ್ಯವಾಗಿ ಕಾಣುತ್ತಿದೆ. ಕನ್ನಡ ಬಳಗ ಕಾರ್ಯಕ್ರಮಕ್ಕೆ ಕರ್ನಾಟಕದಿಂದ ಶ್ರೀ ಜಯಂತ್ ಕೈಕಿಣಿ ಹಾಗೂ ಖ್ಯಾತ ಗಾಯಕಿ ಡಾ| ಶಮಿತಾ ಮಲ್ನಾಡ್ ಬರುತ್ತಿದ್ದರೆ, Orpington ಹಾಗೂ Swindon ಕಾರ್ಯಕ್ರಮಕ್ಕೆ ಖ್ಯಾತ ಗಾಯಕಿ ಸಂಗೀತಾ ರಾಜೀವ್ ಹಾಗೂ ತಂಡ ಬರುತ್ತಿದೆ. ಕನ್ನಡ ಬಳಗ ಯುಗಾದಿ ಹಬ್ಬವನ್ನು Nottingham ನಲ್ಲಿ ಆಚರಿಸುತ್ತಿದ್ದರೆ, Leicester ಹಾಗೂ ಡರ್ಬಿ ತಂಡಗಳು ಒಂದುಗೂಡಿ Leicester ನಲ್ಲಿ ಆಚರಿಸುತ್ತಿದ್ದಾರೆ.
ಇನ್ನು ಕೆಲವು ಕನ್ನಡ ಮಿತ್ರರು ನನಗೆ ಮೆಸೇಜ್ ಮಾಡಿ ಕನ್ನಡಿಗರುಯುಕೆ ಈ ಬಾರಿ ಯುಗಾದಿ ಆಚರಿಸುತ್ತಾ ಇದೆಯಾ, ದಯವಿಟ್ಟು ಹೇಳಿ ನಾವೂ ಈ ಸಲ ಬರಬೇಕು ಅಂದುಕೊಂಡಿದೀವಿ ಎಂದು ಕೇಳಿದಾಗ ಏನು ಹೇಳೋದು ಬಿಡೋದು ಎಂದು ತೋಚಲಿಲ್ಲ. ಯುಕೆ ಕನ್ನಡಿಗರ ಗುಂಪುಗಾರಿಕೆ ಎಷ್ಟರ ಮಟ್ಟಿಗಿದೆ ಎಂದರೆ, ಹಲವು ಕನ್ನಡಿಗರು ಈಗಾಗಲೇ ಯಾವುದೇ ಕನ್ನಡ ಕಾರ್ಯಕ್ರಮಕ್ಕೆ ಹೋಗಬಾರದು ಎಂದು ಪಣ ತೊಟ್ಟಿದ್ದಾರೋ ಏನೋ ಎಂದು ನನಗೆ ಅನ್ನಿಸುತ್ತಿದೆ. ಹತಾಶೆಯಿಂದ ಈ ಮಾತನ್ನು ಹೇಳುತ್ತಿಲ್ಲ ಆದರೆ ನನಗೇನೋ ಎಷ್ಟೊಂದು ಕಾರ್ಯಕ್ರಮಗಳನ್ನು ಒಂದೇ ದಿನ ಒಂದೇ ಕಾರಣಕ್ಕೆ ಹಮ್ಮಿಕೊಂಡಾಗ ಕೆಲವರು ಈ ಉಸಾಬರಿನೇ ಬೇಡ ಎಂದು ಮನೆಯಲ್ಲೇ ಯುಗಾದಿ ಆಚರಿಸಿ ಮುಗಿಸುವ ಸಾಧ್ಯತೆಯಿದೆ ಅನ್ನಿಸುತ್ತಿದೆ.
ಹಲವು ಕಾರ್ಯಕ್ರಮ WhatsApp ಗ್ರೂಪ್ ಗೇ ಸೀಮಿತವಾಗಿ ಅಲ್ಲಿಯೇ ಖರ್ಚು ವೆಚ್ಚಗಳ ಲೆಕ್ಕ ಕೊಟ್ಟು ಮುಕ್ತಾಯವಾಗುವದು ಸಾಮಾನ್ಯವಾಗಿದೆ. ಇನ್ನೊಂದು ವಿಷಯ ನನ್ನ ಗಮನಕ್ಕೆ ಬಂದಿರುವದೇನೆಂದರೆ, ಒಂದು ಕಡೆಯಂತೂ ಯುಗಾದಿ ಆಚರಿಸುತ್ತಿರುವ ಮಾಹಿತಿ ಊರಿಂದ ೩ ಮೈಲಿಗಷ್ಟೇ ಸೀಮಿತವಾಗಿದೆ. ನನಗೆ ಗೊತ್ತಾಗಿರುವಂತೆ, ೩ ಮೈಲಿನಾಚೆ ಇರುವ ಕನ್ನಡಿಗರಿಗೆ ಈ ಕಾರ್ಯಕ್ರಮಕ್ಕೆ ಭಾಗವಹಿಸುವ ಪ್ರವೇಶವೇ ಇಲ್ಲ. ಇಂತಹ ನಿರ್ಬಂಧನೆ ಕನ್ನಡಿಗರಿಗೆ ಸರಿಯೇ?

ಇವೆಲ್ಲವನ್ನೂ ನೋಡಿದಾಗ ನನಗನ್ನಿಸುವದು ನಾವು ಯುಕೆ ಕನ್ನಡಿಗರು ಒಂದುಗೂಡುವ ಪ್ರಯತ್ನ ಮಾಡಿದರೆ ಯುಕೆ ಕನ್ನಡಿಗರ ಪ್ರಭಾವ ಹೊರಗಡೆ ಇನ್ನಷ್ಟು ಹೆಚ್ಚಾಗುವುದು ಖಂಡಿತ.
ಯಾವುದೇ ಕಾರ್ಯಕ್ರಮವನ್ನು ಮೂರು ಪ್ರದೇಶಗಳಲ್ಲಿ ದೊಡ್ಡಪ್ರಮಾಣದಲ್ಲಿ ಆಚರಿಸಿದರೆ ಎಷ್ಟು ಚೆನ್ನಾಗಿರುತ್ತದೆ ಹಾಗೂ ಯುಕೆ ಕನ್ನಡಿಗರ ಧ್ವನಿ ದೂರ ದೂರ ತಲುಪುವದಲ್ಲದೇ, ಇಲ್ಲಿಯ ಸ್ಥಳೀಯ ಕಲಾವಿದರಿಗೆ ಹಾಗೂ ಕರ್ನಾಟಕದಿಂದ ಬರುವ ಕಲಾಕಾರರಿಗೆ ಇನ್ನಷ್ಟು ಪ್ರೋತ್ಸಾಹ ದೊರಕುವದಿಲ್ಲವೇ?
ಒಂದು ಕಾರ್ಯಕ್ರಮ Scotland ನಲ್ಲಿ, ಒಂದು Midland ನಲ್ಲಿ ಹಾಗೂ ಒಂದು ಲಂಡನ್ ನಲ್ಲಿ ಆಚರಿಸಿದರೆ ಎಷ್ಟು ಚೆನ್ನಾಗಿರುತ್ತದೆ ಎಂಬುದು ನನ್ನ ಅಭಿಪ್ರಾಯ. ನಮ್ಮಲ್ಲಿ ಆಯೋಜಕರ ಕೊರತೆ ಇಲ್ಲ. ಎಲ್ಲರೂ ಒಂದುಗೂಡಿ ಹತ್ತಾರು ಮೈಲಿ ಡ್ರೈವ್ ಮಾಡಿ ಕಾರ್ಯಕ್ರಮಕ್ಕೆ ಬಂದು ಪ್ರೋತ್ಸಾಹಿಸುವ ಮನೋಭಾವ ಹಾಗೂ ಒಗ್ಗಟ್ಟಾಗಿ ಸೇರಿ ಕೂಡುವ ಮನೋಬಲ ಬೇಕಾಗಿದೆ. Scotland ನಲ್ಲಿ ಆಗಲೇ SKS ಪ್ರಭಾವಿ ಸಂಘಟನೆಯಾಗಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವದು ಒಂದು ಒಳ್ಳೆಯ ಸಂಗತಿ. Midland ನಲ್ಲಿ ಕನ್ನಡ ಬಳಗ ಯುಕೆ ಆ ಪ್ರದೇಶದಲ್ಲಿರುವ ಕನ್ನಡ ಗುಂಪುಗಳನ್ನು ಒಂದುಗೂಡಿಸುವ ಅಗತ್ಯವಿದೆ. ಹಾಗೆಯೇ ಲಂಡನ್ ಸುತ್ತ ಮುತ್ತ ಕನ್ನಡಿಗರುಯುಕೆ ಹಾಗೂ ಇತರ ಗುಂಪುಗಳು ಒಂದಾಗಿ ಒಗ್ಗಟ್ಟಾಗುವ ಪ್ರಯತ್ನ ನಡೆಯಬೇಕಾಗಿದೆ. ಕಾರ್ಡಿಫ್, ಬ್ರಿಸ್ಟಲ್, Swindon ಹಾಗೂ ಇತರ ಪಶ್ಚಿಮ ಕ್ಷೇತ್ರಗಳು ಲಂಡನ್ ಕಡೆ ಆಯೋಜಿಸಿದ ಕಾರ್ಯಕ್ರಮಗಳಿಗೆ ಬೆಂಬಲ ಕೊಟ್ಟರೆ ಬೊಂಬಾಟು!
ಈ ಪರಿಕಲ್ಪನೆಯೊಂದಿಗೆ ಮುಂದಿನ ದೀಪಾವಳಿ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಸಮಯದಲ್ಲಿ ಪ್ರಭಾವಿ ಕನ್ನಡಿಗರು ಒಂದುಗೂಡಿ ಮೇಲಿನ ಮೂರು ಪ್ರದೇಶಗಳಲ್ಲಿ ಒಗ್ಗಟ್ಟಾಗಿ ಬಂದು ಕಾರ್ಯಕ್ರಮಗಳನ್ನು ಆಯೋಜಿಸಬಹುದೇ? ಎಂದು ಆಶಿಸೋಣ.

Comments

comments