ಕ್ಲಬ್ ಹೌಸ್ ಅನುಭವ – ವಿಶ್ವವಾಣಿ ಕ್ಲಬ್

ಈ ವರ್ಷದ ಜೂನ್ ತಿಂಗಳಲ್ಲಿ ನಾನು ಕ್ಲಬ್ ಹೌಸ್ ಎಂಬ ಒಂದು ಮೊಬೈಲ್ ಆಧಾರಿತ ಅಪ್ಲಿಕೇಶನ್ ನಲ್ಲಿ ಸೇರಿಕೊಂಡೆ. ಸುಬ್ರಮಣ್ಯ ಹೆಗಡೆ ನನ್ನ ಗೆಳೆಯ (ಬೆಂಗಳೂರಿನ ಪ್ರಖ್ಯಾತ ಸ್ಟಾಂಡ್ ಅಪ್ ಕಮೇಡಿಯನ್) ನನಗೆ ಕ್ಲಬ್ ಹೌಸ್ ಇನ್ವಿಟೇಶನ್ ಕಳಿಸಿ ಸೇರ್ಪಡೆ ಮಾಡಿದ್ದ.
ಮೊದಲು ಸೇರ್ಪಡೆಯಾದಾಗ ಯಾವ ರೂಮ್ ಗೆ ಹೋಗೋದು, ಯಾರ ಮಾತು ಕೇಳೋದು ಎಂಬುದು ದೊಡ್ಡ ಪ್ರಶ್ನೆಯಾಗಿತ್ತು.. ಅದ್ರಷ್ಟವಷಾತ್ ಯಾವುದೊ ಒಂದು ರೂಮ್ ನಲ್ಲಿ ನಮ್ಮ ಶ್ರೀ ವಿಶ್ವೇಶ್ವರ ಭಟ್ಟರು ನಾನು ಕ್ಲಬ್ ಹೌಸ್ ಸೇರಿದ ದಿನವೇ ಪತ್ರಿಕೆಗಳು ಹಾಗೂ ಮುದ್ರಣ ಮಾಧ್ಯಮಗಳ ಬಗ್ಗೆ ತುಂಬಾ ಸೊಗಸಾಗಿ ಮಾತನಾಡುತ್ತಿದ್ದರು. ಒಬ್ಬ ಕೇಳುಗನಾಗಿ ಅವರ ಪ್ರಭಾವಶಾಲಿಯಾದ, ಅತ್ಯಂತ ತತ್ವವನ್ನೊಳಗೊಂಡ ಮಾತುಗಳು ನನ್ನನ್ನು ಕ್ಲಬ್ ಹೌಸ್ ನಲ್ಲಿ ಹಿಡಿದಿಟ್ಟಿತು. ಮಗನನ್ನು ಶಾಲೆಯಿಂದ ಪಿಕ್ ಅಪ್ ಮಾಡಲು ಹೋಗಿರುವಾಗ ear phone ಹಾಕಿಕೊಂಡು ಕೇಳುತ್ತ ಕೇಳುತ್ತ ಹಾಗೆಯೇ ಸುಮಾರು ೧ ಘಂಟೆ ನಿರಂತರವಾಗಿ ಕೇಳಿದೆ.

ನಾನು ಕ್ಲಬ್ ಹೌಸ್ ಸೇರಿದ್ದು ೧೮ ಜೂನ್ ನಂದು. ಪ್ರಾಸಂಗಿಕವಾಗಿ ವಿಶ್ವವಾಣಿ ಕ್ಲಬ್ ಹೌಸ್ ಶುರುವಾಗಿದ್ದು ಕೂಡ ಅದೇ ದಿನ. ಇಂದು ವಿಶ್ವವಾಣಿ ವಿಶ್ವದಲ್ಲೇ ಬಹು ದೊಡ್ಡ ಕ್ಲಬ್ ಹೌಸ್ ರೂಮ್ ಆಗಿದೆ. ಶುರುವಿನಿಂದ ಇಂದಿನವರೆಗೂ ಸಮಯ ಸಿಕ್ಕಾಗ ಪ್ರತಿ ದಿನ ೭ ಘಂಟೆ ಭಾರತೀಯ ಸಮಯದಲ್ಲಿ ಅವರು ಹಮ್ಮಿಕೊಳ್ಳುತ್ತಿರುವ ಅತ್ಯಂತ ಗಣ್ಯ ವ್ಯಕ್ತಿಗಳು, ಸಾಮಾನ್ಯ ನಾಗರೀಕರಿಂದ ಹಿಡಿದು ಸೆಲೆಬ್ರಿಟಿಸ್ ಅವರ ಮಾತುಗಳು, ಪ್ರಶ್ನೋತ್ತರಗಳು, ಹಾಗೂ ಚರ್ಚೆಗಳನ್ನು ಸಮಯವಿದ್ದಾಗೆಲ್ಲ ನಾನು ಆಲಿಸುತ್ತೇನೆ.

ಶುರುವಿನಲ್ಲಿ ವಿಶ್ವೇಶ್ವರ ಭಟ್ಟರು ಹೊರಡಿಸುತ್ತಿರುವ ಫ್ಲೈಯರ್ ನಲ್ಲಿ “ನಂಜನಗೂಡು ಮೋಹನ್ ಜೊತೆಗಿರುತ್ತಾರೆ” ಎಂದು ಇತ್ತು. ಈ ನಂಜನಗೂಡು ಮೋಹನ್ ಯಾರು ಎಂದು ನನಗೆ ಗೊತ್ತಿರಲಿಲ್ಲ. ವಿಶ್ವವಾಣಿ ಕ್ಲಬ್ ನಲ್ಲಿ ನಾನು ಮೊದಲು ಭಾಗವಹಿಸಿದ ಕಾರ್ಯಕ್ರಮ ಬಹುಷಃ ಶ್ರೀ ವಿನಯ್ ಗುರೂಜೀ ಅವರ ಜೊತೆ ಸಂಭಾಷಣೆ ಕಾರ್ಯಕ್ರಮ. ಆಗಲೇ ನನಗೆ ಗೊತ್ತಾಗಿದ್ದು ನಂಜನಗೂಡು ಮೋಹನ್ ಯಾರು ಎಂದು. ಹೆಚ್ಚಿನದಾಗಿ ವಿಶ್ವವಾಣಿಯ ಕಾರ್ಯಕ್ರಮವನ್ನು ಮೋಹನ್ ಅವರೇ ಶುರು ಮಾಡುತ್ತಾರೆ. ತಮ್ಮ ಚೂಪಾದ, ಗರಿಗರಿಯಾದ ಮಾತಿನಿಂದ ದಿನದ ಅತಿಥಿಗಳನ್ನು ಬರಮಾಡಿಕೊಂಡು ವಿಶ್ವೇಶ್ವರ ಭಟ್ಟರಿಗೆ ಸ್ವಾಗತಿಸಿ ಅತಿಥಿಗಳ ಪರಿಚಯ ಭಟ್ಟರ ಬಾಯಿಂದಲೇ ಮಾಡಿಕೊಡಲು ಕೋರುತ್ತಾರೆ. ತದನಂತರ ಭಟ್ಟರು ಅತ್ಯಂತ ವಿನಮ್ರತೆಯಿಂದ ತಮ್ಮ ಶುದ್ಧ ಕನ್ನಡದಲ್ಲಿ ಎಲ್ಲರಿಗೂ ಮನ ತಟ್ಟುವಂತೆ ತುಂಬಾ ಪರಿಣಾಮಕಾರಿಯಾಗಿ ಅತಿಥಿಗಳನ್ನು ಪರಿಚಯ ಮಾಡಿ ಶ್ರೀಮತಿ ರೂಪಾ ಗುರುರಾಜ್ ಅವರಿಗೆ ವಿಶ್ವವಾಣಿ ಕ್ಲಬ್ ಶಿಷ್ಟಾಚಾರ ಹಾಗೂ ನಡವಳಿಕೆಯ ಬಗ್ಗೆ ನೆರೆದ ಶೋತೃಗಳಿಗೆ ತಿಳಿಹೇಳಲು ಆಮಂತ್ರಿಸುತ್ತಾರೆ. ಅದಾದ ಮೇಲೆ ಸುಮಾರು ೧ ಘಂಟೆ ಅಥಿತಿ ಭಾಷಣ ಹಾಗೆಯೇ ಪ್ರಶ್ನೋತ್ತರ. ಹೀಗೆ ೨ ರಿಂದ ೩ ಘಂಟೆ ನಡೆಯುವ ಈ ಒಂದು ಕ್ಲಬ್ ಹೌಸ್ ಸಂವಾದ ನಿರಂತರವಾಗಿ ಕಳೆದ ೫೦ ಕ್ಕೂ ಹೆಚ್ಚು ದಿನಗಳಿಂದ ಒಂದು ದಿನವೂ ಬಿಡುವಿಲ್ಲದೆ ನಡೆದುಕೊಂಡು ಬರುತ್ತಿರುವುದು ವಿಶ್ವೇಶ್ವರ ಭಟ್ಟರ ವಿಶ್ವವಾಣಿ ಕ್ಲಬ್ಬಿನ ವಿಶೇಷ ಸಾಧನೆಯಾಗಿದೆ. ಮೋಹನ್ ಅವರು ವಿಶ್ವೇಶ್ವರ ಭಟ್ಟರನ್ನು ನಮ್ಮ ವಿಶ್ವವಾಣಿ ಕ್ಲಬ್ ಕ್ಯಾಪ್ಟನ್ ಎಂದು ಹೇಳುತ್ತಾರೆ. ನನ್ನ ಪ್ರಕಾರ ವಿಶ್ವೇಶ್ವರ ಭಟ್ಟರು ಎಲ್ಲಾ ಕನ್ನಡಿಗರಿಗೂ ಒಬ್ಬ ಮಾದರಿಯ ಕ್ಯಾಪ್ಟನ್. ಇಂದು ಟಿ.ವಿ. ಚಾನೆಲ್ ಗಳು, ರೇಡಿಯೋ, ಡಿಜಿಟಲ್ ರೇಡಿಯೋ, ಟ್ವಿಟ್ಟರ್, ಫೇಸ್ಬುಕ್, ವಾಟ್ಸಪ್ಪ್, ಜೂಮ್ ಹೀಗೆ ಹಲವಾರು ಮಾಧ್ಯಮಗಳು ಬಳಕೆಯಲ್ಲಿರುವಾಗ ಒಂದು ಶ್ರವಣ ಮಾಧ್ಯಮವಾದ ಕ್ಲಬ್ ಹೌಸ್ ನನ್ನ ಅಳವಡಿಸಿಕೊಂಡು ಅತ್ಯಂತ ಪ್ರಭಾವಶಾಲಿಯಾಗಿ ಲಕ್ಷಾಂತರ ಯುವಕ ಯುವಕಿಯರಿಗೆ ಇಂದು ವಿಶ್ವವಾಣಿ ಕ್ಲಬ್ ಮಾದರಿಯಾಗಿದೆ ಎಂದರೆ ಅದರ ಯಶಸ್ಸು ವಿಶ್ವೇಶ್ವರ ಭಟ್ಟರಿಗೆ ಸಲ್ಲುತ್ತದೆ. ಬರೀ ಕನ್ನಡಿಗರೊಂದೇ ಅಲ್ಲ, ಕನ್ನಡೇತರರೂ ಕೂಡ ವಿಶ್ವವಾಣಿ ಕ್ಲಬ್ ಬಂದು, ಭಾಷೆ ಗೊತ್ತಿಲ್ಲದಿದ್ದರೂ ಅತಿಥಿಗಳ ಮಾತುಗಳನ್ನು ಆಲಿಸುತ್ತಾರೆ.
ವಿಶ್ವವಾಣಿ ಕ್ಲಬ್ ಅಲ್ಲದೆ, ಇನ್ನಿತರ ಕ್ಲಬ್ ಗಳಿಗೆ ನಾನು ಆಗಾಗ ಭೇಟಿ ನೀಡುತ್ತಿರುತ್ತೇನೆ. ಒಂದು ವೇಳೆ ಅಲ್ಲೀಯೇನಾದರೂ ವಿಶ್ವೇಶ್ವರ ಭಟ್ಟರು ಕಾಣಿಸಿಕೊಂಡರೆ ಆ ಕ್ಲಬ್ ನ ಚಟುವಟಿಕೆ ಚುರುಕುಗೊಂಡು ಎಲ್ಲರು ಭಟ್ಟರನ್ನು ಮೇಲಕ್ಕೆ ಎಳೆದುಕೊಳ್ಳಿ ಎಂದು ವಿನಂತಿಸುವುದನ್ನು ಸಾಮಾನ್ಯವಾಗಿ ನೋಡಿದ್ದೇನೆ. ಗಾಂಚಲಿ ಬಿಡಿ ಕನ್ನಡ ಮಾತಾಡಿ ಎಂಬ ಕ್ಲಬ್ ನಲ್ಲಿ ಮೊನ್ನೆ ಯಾಕೋ ಗೊತ್ತಿಲ್ಲ ನನ್ನನ್ನು ಮಾಡರೇಟರ್ ಮಾಡಿದ್ದರು. ಮಾಡರೇಟರ್ ಮಾಡಿದ ಕೂಡಲೇ ನನಗೆ ಮೆಸೇಜ್ ಬಂತು. ಕೆಳಗಡೆ ವಿಶ್ವೇಶ್ವರ್ ಭಟ್ ಸರ್ ಬಂದಿದ್ದಾರೆ, ಸರ್ ಅವರನ್ನ ಮೇಲಕ್ಕೆ ಕರೆಯಿರಿ ಎಂದು. ಹೀಗೆ ಯಾವ ಕ್ಲಬ್ ಹೋಗಿ ಅಲ್ಲಿ ವಿಶ್ವೇಶ್ವರ್ ಭಟ್ಟರು ಬಂದರೆ ಅವರನ್ನು ಮೇಲಕ್ಕೆ ಎಳೆದುಕೊಂಡು ಮಾತನಾಡಿಸುವ ತವಕವನ್ನು ನೋಡಿದರೆ ವಿಶ್ವೇಶ್ವರ ಭಟ್ಟರ ಮೇಲೆ ಕ್ಲಬ್ ಹೌಸ್ ನ ಸದಸ್ಯರು ಅವರ ಮೇಲಿಟ್ಟುರುವ ಅಭಿಮಾನ, ಗೌರವ ಹಾಗೂ ಅವರ ಒಂದೊಂದು ಮಾತುಗಳಿಗಿರುವ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ.

ಸಾಗರದಾಚೆ ಇರುವ ನನ್ನಂತವರಿಗೆ ನಮ್ಮ ತಾಯ್ನಾಡಿನಲ್ಲಿರುವ ಸಾಧಕರ ಬಗ್ಗೆ ತಿಳಿದುಕೊಳ್ಳುವ ಅವಕಾಶವನ್ನು ಈ ಕ್ಲಬ್ ಹೌಸ್ ಒದಗಿಸಿ ಕೊಟ್ಟಿದೆ. ಹಲವಾರು ಅತಿಥಿಗಳು ನನಗೆ ವ್ಯಯುಕ್ತಿಕವಾಗಿ ಪರಿಚಯವಿದ್ದರೂ ಅವರ ಜೀವನ, ನಡೆದುಬಂದ ದಾರಿ, ಬದುಕಿನ ಬಗ್ಗೆ ಅವರ ಅವಲೋಕನ ಹೀಗೆ ಹಲವಾರು ವಿಷಯಗಳ ಬಗ್ಗೆ ಹೆಚ್ಚಿನ ಅರಿವನ್ನು ಈ ಕ್ಲಬ್ ಹೌಸ್ ಮಾಡಿಕೊಡುತ್ತಿದೆ. ನಾವು ಟಿ.ವಿ ಅಥವಾ ರೇಡಿಯೋ ಮಾಧ್ಯಮಗಳಲ್ಲಿ ನೋಡುವ ಅಥವಾ ಕೇಳುವ ಬಗೆ ಒಂದಾದರೆ ಈ ಕ್ಲಬ್ ಹೌಸ್ ನ ಅನುಭವವೇ ವಿಭಿನ್ನವಾಗಿದೆ. ಇಲ್ಲಿ ಕಿವಿ ಕೊಟ್ಟು ನಾವು ಕೇಳುವಾಗ ನಮ್ಮವರು ನಮ್ಮ ಕಿವಿಯಲ್ಲೇ ಬಂದು ನೇರವಾಗಿ ಮಾತನಾಡುತ್ತಿದ್ದಾರೆ ಎಂಬ ವಿಶೇಷ ಸಾಕ್ಷಾದನುಭವ ಆಗುತ್ತಿದೆ. ಬಹುಷಃ ಈ ಒಂದು ಅನುಭವದಿಂದಲೇ ಸಾವಿರಾರು ಜನ ವಿಶ್ವವಾಣಿ ಕ್ಲಬ್ ಬಂದು ವಿಶ್ವವಾಣಿ ಕ್ಲಬ್ ನಲ್ಲಿ ನಡೆಯುವ ಸಂಭಾಷಣೆಯನ್ನು ಬಹು ಹತ್ತಿರದಿಂದ ಆಲಿಸುತ್ತಾರೆ ಎಂದು ಅನಿಸುತ್ತದೆ.
ಇನ್ನು ಹಲವಾರು ಕ್ಲಬ್ ಹೌಸ್ ನಲ್ಲಾದ ನನ್ನ ಅನುಭವಗಳನ್ನು ಮುಂದಿನ ದಿನಗಳಲ್ಲಿ ಹಂಚಿಕೊಳ್ಳುತ್ತೇನೆ.

Comments

comments